ಬೈಂದುರು: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಆರಕ್ಷಕ ಠಾಣೆ ಬೈಂದೂರು ಇದರ ವತಿಯಿಂದ ಪೊಲೀಸ್ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು
ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದೇವೆ.ದೃಷ್ಟಿ ಯೋಜನೆಯನ್ನು ಬೈಂದೂರು ಆರಕ್ಷಕ ಠಾಣೆ ವ್ಯಾಪ್ತಿಯ ಬೈಂದೂರು ಮತ್ತು ಯಡ್ತರೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿದೆ.ಗಾರ್ಡ್‌ಗಳ ವೇತನವನ್ನು ಸ್ಥಳೀಯರೇ ಸಂಗ್ರಹಿಸಿ ಸಂಸ್ಥೆಗೆ ನೀಡಲಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು, ಅನೈತಿಕ ಚಟುವಟಿಕೆಗಳ ಬಗ್ಗೆಯೂ ಇವರು ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಮುಂದೆ ಇದನ್ನು ಎಲ್ಲ ವಾರ್ಡ್ ಸಹಿತ ಜಿಲ್ಲೆಗೆ ವಿಸ್ತರಿಸುವ ಉದ್ದೇಶವೂ ಇದೆ ಎಂದರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಜನಸ್ನೇಹಿ ಯೋಜನೆಗಳು ಅಪರಾಧ ಸಂಖ್ಯೆ ಇಳಿಮುಖದ ಜೊತೆಗೆ ಕಳ್ಳತನ ಮುಂತಾದ ಪ್ರಕರಣ ತಡೆಗಟ್ಟಲು ಆನುಕೂಲವಾಗುತ್ತದೆ ಎಂದರು.
ಜಂಬೋಸ್ಟಾರ್ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವಿಸ್ ಹೆಚ್.ಆರ್ ಕಾವ್ಯ ಅವರು ಮಾತನಾಡಿ ಒಂದು ಪ್ರದೇಶದಲ್ಲಿನ 50-150 ಮನೆಗಳನ್ನು ಕೇಂದ್ರೀಕರಿಸಿಕೊಂಡು ಸಂಪೂರ್ಣ ತರಬೇತಿ ಪಡೆದ ಗಾರ್ಡ್ ಅನ್ನು ನೇಮಕ ಮಾಡಿ ಕಳ್ಳತನ ಸೇರಿದಂತೆ ಅಪರಾಧಗಳನ್ನು ತಡೆಯುವ ಯೋಜನೆಯೇ ದೃಷ್ಟಿ.ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ನಮ್ಮ ಸಂಸ್ಥೆ ಪೂರೈಕೆ ಮಾಡುತ್ತದೆ. ಇಲ್ಲಿಗೆ ನೇಮಕ ಮಾಡುವ ಗಾರ್ಡ್ ಪ್ರಥಮ ಚಿಕಿತ್ಸೆ, ತುರ್ತುಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣೆ ಬಗ್ಗೆಯೂ ಸಂಪೂರ್ಣ ತರಬೇತಿ ಪಡೆದಿರುತ್ತಾರೆ. ಗಾರ್ಡ್, ಮಿಲಿಟರಿ ಸಮವಸ್ತ್ರದೊಂದಿಗೆ ಬಂದೂಕು, ಪಿಸ್ತೂಲ್, ವಾಕಿಟಾಕಿ, ಸರ್ಚ್ ಲೈಟ್, ಪೊಲೀಸ್ ವೆರಿಫಿಕೇಶನ್ ಸಹಿತ ಎಲ್ಲ ವ್ಯವಸ್ಥೆಯೊಂದಿಗೆ ಕಾವಲು ಕಾಯುವ ಕಾರ್ಯ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಬಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ,ನಾಗರಾಜ ಶೆಟ್ಟಿ,ಸದಾಶಿವ ಡಿ.ಪಡುವರಿ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಕುಂದಾಪುರ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ತಿಮ್ಮೇಶ ಬಿ.ಎನ್ ಸ್ವಾಗತಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಕ್ರೈಂ ಇನ್ಸ್‌ಪೆಕ್ಟರ್ ನವೀನ್ ಪಿ.ಬೋರ್ಕರ್ ವಂದಿಸಿದರು.
