ಪಡುಬಿದ್ರಿ : ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಎರ್ಮಾಳು ನಾರಾಳ್ತಾಯ ಗುಡಿಯ ಬಳಿ ರವಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಗೂಡ್ಸ್ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಅದಮಾರು ವಕೀಲರ ತೋಟದ ನಿವಾಸಿ ಗುರುರಾಜ ರಾವ್ (63) ಎಂದು ಗುರುತಿಸಲಾಗಿದೆ.ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಗುರುರಾಜ ರಾವ್ ಅವರು ಸ್ಕೂಟಿಯಲ್ಲಿ ರಾಂಗ್ ಸೈಡ್‌ನಿಂದ ಧಾವಿಸಿ ಬಂದಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಸ್ಕೂಟಿ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗುರುರಾಜ ರಾವ್ ಅವರ ದೇಹವು ರಸ್ತೆಯ ಒಂದಷ್ಟು ದೂರಕ್ಕೆ ಹಾರಿ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನವು ರಸ್ತೆ ಬದಿಗೆ ಪಲ್ಟಿಯಾಗಿದ್ದು, ಮಂಗಳೂರು ಮೂಲದ ಚಾಲಕ ವಿಜಯ ಕಾಮತ್ ಅವರಿಗೆ ಅತ್ಯಂತ ಗಂಭೀರ ಗಾಯಗಳಾಗಿವೆ. ಅವರ ಮೆದುಳಿನ ಭಾಗ ಹೊರಕ್ಕೆ ಬಂದಿದ್ದು, ಒಂದು ಕೈ ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಪಡುಬಿದ್ರಿ ಪಿಎಸ್‌ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.





