ಕೊಲಂಬೊ: ಸೈಬರ್ ಅಪರಾಧಿಗಳು ಶ್ರೀಲಂಕಾದ ಹಣಕಾಸು ಸಚಿವಾಲಯದ ಕಂಪ್ಯೂಟರ್ ಸಿಸ್ಟಮ್‍ಗಳನ್ನು ಹ್ಯಾಕ್ ಮಾಡಿ 2.5 ದಶಲಕ್ಷ ಡಾಲರ್(23,48, 94,625 ರೂ.) ಹಣವನ್ನು ದೋಚಿದ್ದಾರೆ ಎಂದು ಸರಕಾರ ಗುರುವಾರ ಹೇಳಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ದ್ವೀಪರಾಷ್ಟ್ರಕ್ಕೆ ಸೈಬರ್ ದಾಳಿ ಮಾರಕ ಆಘಾತವಾಗಿದೆ. ಈ ಹಣವನ್ನು ಆಸ್ಟ್ರೇಲಿಯಾಕ್ಕೆ ಸಾಲ ಮರುಪಾವತಿಗೆಂದು ತೆಗೆದಿರಿಸಲಾಗಿತ್ತು. ಸೈಬರ್ ದಾಳಿಯ ಬಳಿಕ ಸಾರ್ವಜನಿಕ ಸಾಲ ನಿರ್ವಹಣಾ ಕಚೇರಿ(ಪಿಡಿಎಂಒ)ದ ನಾಲ್ಕು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಹರ್ಷನ ಸೂರ್ಯಪ್ಪೆರುಮ ಸುದ್ದಿಗಾರರಿಗೆ ತಿಳಿಸಿದ್ದಾರೆ.





