ಮಲ್ಪೆ, ಏಪ್ರಿಲ್ 16: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಾಟಾ 407 ಟಿಪ್ಪರ್ ವಾಹನವನ್ನು ಮಲ್ಪೆ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಉದ್ದಿನಹಿತ್ಲಿನಲ್ಲಿ ನಡೆದಿದೆ.
ಮಲ್ಪೆ ಪೊಲೀಸ್ ಠಾಣೆಯ ಡಿ.ಪಿ.ಎಸ್.ಐ ಅನೀಲ್ ಕುಮಾರ್ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಜುಮಾದಿನಗರ ಕಡೆಯಿಂದ ಉದ್ದಿನಹಿತ್ಲು ಮಾರ್ಗವಾಗಿ ಮಲ್ಪೆ ಕಡೆಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಳದಿ ಬಣ್ಣದ ಟಾಟಾ 407 ಟಿಪ್ಪರ್ ವಾಹನ ತಡೆದು ಪರಿಶೀಲಿಸಿದರು.
ವಾಹನದ ಚಾಲಕ ಬೈಲಪ್ಪ ಬಿರಾದಾರ್ ಅವರಲ್ಲಿ ಮರಳು ಸಾಗಾಟಕ್ಕೆ ಸಂಬಂಧಿಸಿದ ಪರವಾನಿಗೆ ದಾಖಲೆಗಳನ್ನು ಕೇಳಿದಾಗ ಯಾವುದೇ ಮಾನ್ಯ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ, ಆರೋಪಿತರಾದ ವೈ.ಎಂ ಬ್ರದರ್ಸ್‌ನ ಸಾದಿಕ್ ಹಾಗೂ ಚಾಲಕ ಯಾವುದೋ ಸ್ಥಳದಿಂದ ಮರಳನ್ನು ಕಳ್ಳತನ ಮಾಡಿಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಪೊಲೀಸರು ಮಹಜರು ಮೂಲಕ ಸುಮಾರು 1½ ಯುನಿಟ್ ಮರಳು (ಅಂದಾಜು ಮೌಲ್ಯ ರೂ. 5,000) ಹಾಗೂ ಟಾಟಾ 407 ಟಿಪ್ಪರ್ ವಾಹನ (ಅಂದಾಜು ಮೌಲ್ಯ ರೂ. 3 ಲಕ್ಷ) ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.





