ಹೆಬ್ರಿ, ಜೂನ್ 8: ಹೆಬ್ರಿ ತಾಲೂಕಿನ ಹೊಸೂರು ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ₹13.07 ಲಕ್ಷಕ್ಕೂ ಅಧಿಕ ಮೌಲ್ಯದ ನಗದು, ಮೊಬೈಲ್‌ಗಳು, ವಾಹನಗಳು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ ಬಂದ ಮಾಹಿತಿಯಂತೆ, ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೊಸೂರು ಪ್ರದೇಶದ ಚಪ್ಪರದಲ್ಲಿ ರಾತ್ರಿ ಸುಮಾರು 10.45 ಗಂಟೆಗೆ ದಾಳಿ ನಡೆಸಲಾಯಿತು. ಈ ವೇಳೆ ಆರೋಪಿಗಳು ಟೇಬಲ್ ಮೇಲೆ ಹಣವನ್ನು ಪಣವಾಗಿ ಇಟ್ಟು “ಅಂದರ್-ಬಾಹರ್” ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ.
ದಾಳಿ ವೇಳೆ ವಿಜೇಶ್, ದಸ್ತಗೀರ್ ಹಾಗೂ ರೋಹಿತ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇತರ ಹಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಿಂದ ₹23,970 ನಗದು, ನಾಲ್ಕು ಮೊಬೈಲ್ ಫೋನ್‌ಗಳು, ಇಸ್ಪೀಟ್ ಕಾರ್ಡ್‌ಗಳು, ಟೇಬಲ್, ಕುರ್ಚಿಗಳು, ಬ್ಯಾಟರಿ ಹಾಗೂ ಬೆಳಕಿನ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಜೂಜಾಟಕ್ಕೆ ಬಳಸಲಾಗಿದೆ ಎನ್ನಲಾದ ಒಂದು ಕಾರು, ಎರಡು ಸ್ವಿಫ್ಟ್ ಕಾರುಗಳು, ಒಂದು ಮಾರುತಿ ಆಲ್ಟೋ ಕಾರು, ಎರಡು ದ್ವಿಚಕ್ರ ವಾಹನಗಳು ಹಾಗೂ ಒಂದು ಸ್ಕೂಟಿಯನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ₹13,07,370 ಎಂದು ಪಂಚರು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳು ವ್ಯವಸ್ಥಿತವಾಗಿ ಅಪರಾಧ ಜಾಲ ನಿರ್ಮಿಸಿಕೊಂಡು ಹಣವನ್ನು ಪಣವಾಗಿ ಇಟ್ಟು ಜೂಜಾಟ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




