Home Art & Culture ಮಲ್ಪೆ: ಬೊಬ್ಬರ್ಯನ ಮೊರೆ ಹೋದ ಕಡಲ ಮಕ್ಕಳು…!!

ಮಲ್ಪೆ: ಬೊಬ್ಬರ್ಯನ ಮೊರೆ ಹೋದ ಕಡಲ ಮಕ್ಕಳು…!!

ಉಡುಪಿ: ಕಳೆದ ಎರಡು ತಿಂಗಳಿಂದ ಕರ್ನಾಟಕ ಕರಾವಳಿಯಲ್ಲಿ ಹವಾಮಾನ ವೈಪರಿತ್ಯ ಜನರನ್ನು ಕಾಡುತ್ತಿದೆ. ಕಡಲನ್ನು ನಂಬಿದ ಸಣ್ಣಪುಟ್ಟ ದೋಣಿಯವರಿಗೆ ಕಸುಬಿಲ್ಲದಂತಾಗಿದೆ. ಜೀವನವಿಡಿ ದೈವ ದೇವರನ್ನು ನಂಬಿ ಬದುಕುವ ಮಂದಿ ದಿಕ್ಕು ತೋಚದಂತಾಗಿದ್ದಾರೆ. ಇನ್ನುಳಿದ 25 ದಿನ ಬುಟ್ಟಿ ತುಂಬಾ ಮೀನು ಕೊಡು ಸಾಗರದ ಅಲೆಯನ್ನು ಸೀಳಿ ಮುನ್ನಡೆಯುವ ಶಕ್ತಿ ಕೊಡು ಎಂದು ಕಡಲ ಮಕ್ಕಳು ದೈವರಾಜ ಬೊಬ್ಬರ್ಯನ ಮೊರೆ ಹೋಗಿದ್ದಾರೆ.

ಮೇ 15 ರ ನಂತರ ಕರ್ನಾಟಕದ ಕರಾವಳಿಯಲ್ಲಿ ಹವಾಮಾನ ವೈಪರಿತ್ಯ ಶುರುವಾಗಿದೆ. ಲೆಕ್ಕಕ್ಕಿಂತ ಹೆಚ್ಚು ಮಳೆಯಾಗಿದೆ. ಚಂಡಮಾರುತ ವಾಯುಭಾರ ಕುಸಿತದಿಂದ ಹವಾಮಾನ ಇಲಾಖೆಯದ್ದೇ ಲೆಕ್ಕಾಚಾರ ಉಲ್ಟಾ ಆಗಿದೆ.

ನಿಯಮದ ಪ್ರಕಾರ ಜೂನ್ ಒಂದರಿಂದ ಸಣ್ಣಪುಟ್ಟ ದೋಣಿಗಳು ಸಮುದ್ರಕ್ಕಿಳಿದು ಕಸುಬು ಮಾಡಬೇಕಿತ್ತು. ಎಲ್ಲಾ ದೋಣಿಗಳು ಸಮುದ್ರ ಇಳಿದಿಲ್ಲ ಇಳಿದ ದೋಣಿಗಳಿಗೆ ಮೀನುಗಳು ಸಿಗುತ್ತಿಲ್ಲ. ದೋಣಿ ದೋಣಿ ಬಿದ್ದು ಜೀವಹಾನಿಯಾಗಿದೆ. ಪರಿಹಾರಕ್ಕಾಗಿ ದೈವದ ಮೊರೆ ಹೋಗಿದ್ದಾರೆ.

ಮಲ್ಪೆ ಸಮೀಪದ ಕಲ್ಮಾಡಿ ಗುಡ್ಡದ ಮೇಲೆ ಇರುವ ದೈವರಾಜ ಬೊಬ್ಬರ್ಯನಿಗೆ ದರ್ಶನ ಸೇವೆ ಮಾಡಿಸಿದ್ದಾರೆ. ಜೂನ್ ತಿಂಗಳಲ್ಲಿ ನಿರಂತರ ಭಾರಿ ಮಳೆ ಚಂಡಮಾರುತದ ಎಫೆಕ್ಟ್ ನಿಂದ ಮೀನು ತೀರಕ್ಕೆ ಬಂದಿರಲಿಲ್ಲ. ಅಗಸ್ಟ್ 10 ನಾಡದೋಣಿ ಮೀನುಗಾರಿಕೆ ಮುಕ್ತಾಯವಾಗುತ್ತದೆ. ಜುಲೈ ಅರ್ಧ ಕಳೆದರೂ ಕಸುಬು ಆಗದ ಕಾರಣ ಎಲ್ಲಾ ನಾಡದೋಣಿ ಮೀನುಗಾರರು ಪೂಜೆ ಮಾಡಿಸಿದರು.

ದರ್ಶನ ಸೇವೆಯ ನಂತರ ನದಿ ತೀರದ ವರೆಗೆ ಪಂಜು ಹಿಡಿದು ದೈವ ಸವಾರಿ ನಡೆಯಿತು. ದೈವವನ್ನು ನದಿ ತೀರಕ್ಕೆ ಬರಮಾಡಿಕೊಂಡ ಮೀನುಗಾರರು ಉತ್ತಮ ಕಸುಬು ಮತ್ತು ರಕ್ಷಣೆಗಾಗಿ ಅಬ್ಬರದ ಕಡಲಿನಲ್ಲಿ ಇಳಿದು ಕಸುಬು ಮಾಡುವ ಸಂದರ್ಭದಲ್ಲಿ ಪ್ರಾರ್ಥಿಸಿದರು.. ದೈವ ಅಭಯ ನೀಡಿದೆ.

ಕರ್ನಾಟಕ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ತಾಂತ್ರಿಕವಾಗಿ ಬಹಳ ಮುಂದುವರೆದಿದೆ. ಮಳೆಗಾಲ ಆರಂಭದಲ್ಲಿ ಪುಟ್ಟ ದೋಣಿಗಳನ್ನು ಹಿಡಿದು ಕಸುಬು ಮಾಡುವ ಮಂದಿ ಅದನ್ನೇ ನಂಬಿ ಜೀವನ ಮಾಡುತ್ತಾರೆ. ದೈವದನುಡಿಯಂತೆ ಉಳಿದ 20 ದಿನ ದೋಣಿ ಇಳಿದು ಬುಟ್ಟಿ ತುಂಬಾ ಮೀನು ಸಿಕ್ಕರೆ ಹೊಟ್ಟೆ ತುಂಬಾ ಊಟ ಮಾಡುವ ನಿರೀಕ್ಷೆಯಲ್ಲಿದ್ದಾರೆ.