ಉಡುಪಿ: ನಾಲ್ಕು ವರ್ಷಗಳ ಹಿಂದೆ ಮಲ್ಪೆ ಬಾಪುತೋಟ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಮೀನು ಕಾರ್ಮಿಕ ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್(೩೫) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಎರಡನೇ ಉಡುಪಿಯ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ ಅಂಬಿಗ(೩೦) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ಇವರು ಶ್ರೀಗುರು ಸಿದ್ದಿ ಬೋಟಿನಲ್ಲಿ ಮೀನು ಗಾರಿಕೆ ಮಾಡಿಕೊಂಡಿದ್ದು, ಕೆಲಸ ಮುಗಿಸಿ ೨೦೨೨ರ ಎ.೧೩ರಂದು ಬೋಟಿನಲ್ಲಿ ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರ ಇಬ್ಬರು ಊಟ ಮಾಡಲು ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು.
ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಕಬ್ಬಿಣದ ರಾಡ್‌ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹ¯್ಲೆ ನಡೆಸಿದನು. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಾಂತೇಶ್, ಚಿಕಿತ್ಸೆ ಫಲಕಾರಿಯಾಗದೆ ಎ.೧೪ರಂದು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗೆ ಮಹಾಂತೇಶ್‌ನನ್ನು ಕೊಲೆ ಮಾಡುವ ಉದ್ದೇಶ ಕಂಡುಬಂದಿಲ್ಲ. ಆದರೆ ಈತನ ಹಲ್ಲೆಯಿಂದ ಆತ ಮೃತಪಟ್ಟಿರುವುದು ಸಾಭೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿ ನಾಗರಾಜ ಅಂಬಿಗ ಅವರನ್ನು ಐಪಿಸಿ ಸೆಕ್ಷನ್ 304(2) ರ ಅಡಿಯಲ್ಲಿ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೬೫,೦೦೦ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ, ಆರೋಪಿಯು ಆರು ತಿಂಗಳ ಕಾಲ ಸರಳ ಕಾರಾಗೃಹ ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸುವಂತೆ ಆದೇಶಿಸಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.





