Home Crime ಮಂಗಳೂರು : ಮಗು ಮಾರಾಟ ಪ್ರಕರಣ : ದಂಪತಿ ಸಹಿತ ಮೂವರಿಗೆ ಕಠಿನ ಶಿಕ್ಷೆ..!!

ಮಂಗಳೂರು : ಮಗು ಮಾರಾಟ ಪ್ರಕರಣ : ದಂಪತಿ ಸಹಿತ ಮೂವರಿಗೆ ಕಠಿನ ಶಿಕ್ಷೆ..!!

ಮಂಗಳೂರು: ಮಗು ಮಾರಾಟ ಪ್ರಕರಣದ ಆರೋಪಿಗಳಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್‌ ವಿ.ಎನ್‌. ಅವರು 10 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ನಗರದ ಪಜೀರ್‌ ನಿವಾಸಿಗಳಾದ ಲಿನೆಟಾ ವೇಗಸ್‌ (38), ಆಕೆಯ ಪತಿ ಜೊಸ್ಸಿ ವೇಗಸ್‌ (54), ಲಿನೆಟಾ ವೇಗಸ್‌ಳ ತಾಯಿ ಲೂಸಿ ವೇಗಸ್‌ (65) ಮತ್ತು ಮಗುವಿನ ತಾಯಿ ಬಾದಾಮಿಯ ರಂಗವ್ವ (45) ಶಿಕ್ಷೆಗೊಳಗಾದವರು. 2013ರ ಜು.26ರಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಂಗವ್ವ ಮೃತಪಟ್ಟಿದ್ದಾಳೆ.

ಪ್ರಕರಣದ ವಿವರ ಆರೋಪಿಗಳ ಪೈಕಿ ಲೂಸಿ ವೇಗಸ್‌ ಅಂಗನವಾಡಿಯೊಂದಕ್ಕೆ ತೆರಳಿ ಎರಡೂವರೆ ತಿಂಗಳ ಮಗುವೊಂದರ ಆಧಾರ್‌ಕಾರ್ಡ್‌, ಜನನ ಪ್ರಮಾಣಪತ್ರ ಮಾಡಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ರೆಹನಾ ಬಳಿ ಮಾಹಿತಿ ಕೇಳಿದ್ದಳು. ಇದರಿಂದ ಸಂಶಯಗೊಂಡ ರೆಹನಾ ಅವರು “ಚೈಲ್ಡ್‌ಲೈನ್‌’ ಸ್ವಯಂಸೇವಾ ಸಂಸ್ಥೆಗೆ ಮಾಹಿತಿ ನೀಡಿದ್ದರು. ಚೈಲ್ಡ್‌ಲೈನ್‌ನವರು ಲಿನೆಟಾ ವೇಗಸ್‌ ಮನೆಗೆ ತೆರಳಿ ನೋಡಿದಾಗ ಅಲ್ಲಿ ಎರಡೂವರೆ ತಿಂಗಳ ಮಗು ಇರುವುದು ಪತ್ತೆಯಾಗಿತ್ತು. ಅನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಚೈಲ್ಡ್‌ಲೈನ್‌ವರು ಪೊಲೀಸರು ಹಾಗೂ ಸಾಮಾಜಿಕ ಸೇವಾ ಕಾರ್ಯಕರ್ತರೊಂದಿಗೆ ಸೇರಿ ಮಗು ಖರೀದಿಸುವ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ಮಗು ಮಾರಾಟಕ್ಕೆ ಮುಂದಾದಾಗ ಅವರನ್ನು ಬಂಧಿಸಲಾಗಿತ್ತು.

2 ಲ.ರೂ.ಗಳಿಗೆ ಡೀಲ್‌ ಸಮಾಜ ಸೇವಕಿ ವಿದ್ಯಾದಿನಕರ್‌ ಮುಸ್ಲಿಂ ಮಹಿಳೆಯಂತೆ ಹಾಗೂ ಪೊಲೀಸ್‌ ಅಧಿಕಾರಿ ಇಕ್ಬಾಲ್‌ ಅವರ ಪತಿಯಂತೆ ನಟಿಸಿ ಮಗುವನ್ನು ಖರೀದಿಸುವ ಪ್ರಸ್ತಾವ ಮಾಡಿದ್ದರು. ಇದಕ್ಕೆ ಆರೋಪಿಗಳು ಒಪ್ಪಿದ್ದರು. ಅದರಂತೆ 2013ರ ಜು.26ರಂದು ಸಂಜೆ ತೊಕ್ಕೊಟ್ಟಿನ ಕ್ಲಿನಿಕ್‌ವೊಂದಕ್ಕೆ ಆರೋಪಿಗಳನ್ನು ಕರೆಯಿಸಿಕೊಂಡಿದ್ದರು. ಅಲ್ಲಿ ಲಿನೆಟಾ ವೇಗಸ್‌ ಮಗು ಮಾರಾಟಕ್ಕೆ ಸಂಬಂಧಿಸಿ ಮಾತುಕತೆ ನಡೆಸುತ್ತಾ ಮಗುವಿನ ತಾಯಿ ರಂಗವ್ವ ಆಗಿದ್ದು ಆಕೆಗೆ 2 ಲ.ರೂ. ನೀಡಬೇಕಾಗಿದೆ. ನನ್ನ ಬಳಿ ಇರುವ 90,000 ರೂ.ಗಳನ್ನು ಆಕೆಗೆ ನೀಡುತ್ತೇನೆ. ಉಳಿದ ಹಣ ನಾಳೆ ಕೊಡುತ್ತೇನೆ. ಈಗ ನೀವು ನನಗೆ 2 ಲ.ರೂ. ಕೊಡಬೇಕು ಎಂದು ಹೇಳಿ ಮಗುವನ್ನು ವಿದ್ಯಾದಿನಕರ್‌ ಕೈಗೆ ನೀಡಿದ್ದಳು.

ಈ ಸಂದರ್ಭ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಭಾರತೀಯ ದಂಡ ಸಂಹಿತೆ 370(4), ಉಪ ಕಲಂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ರಂಗವ್ವ ಮೃತಪಟ್ಟಿದ್ದಳು.

ಆರೋಪಿಗಳಿಗೆ ಶಿಕ್ಷೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್‌ ವಿ.ಎನ್‌ ಅವರು ಜೂ.30ರಂದು ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಜು.3ರಂದು ಆರೋಪಿಗಳಿಗೆ 10 ವರ್ಷಗಳ ಕಠಿನ ಸಜೆ ಹಾಗೂ ತಲಾ 5,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡ ಪಾವತಿಗೆ ವಿಫ‌ಲವಾದರೆ 6 ತಿಂಗಳ ಕಠಿನ ಸಜೆ ಅನುಭವಿಸಲು ಆದೇಶಿಸಿದ್ದಾರೆ.

ಮಗು ಮಾರಾಟ ಪ್ರಕರಣದಲ್ಲಿ ನೀಡಲಾದ 94,325 ರೂ. ಹಾಗೂ ಲಿನೆಟಾ ವೇಗಸ್‌ಳ 5 ಮೊಬೈಲ್‌ ಅನ್ನು ಮುಟ್ಟುಗೋಲು ಹಾಕುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ. ಪ್ರಕರಣದ ತನಿಖೆಯನ್ನು ಉಳ್ಳಾಲದ ಪಿಎಸ್‌ಐ ರಮೇಶ್‌ ಎಚ್‌.ಹಾನಪುರ ಅವರು ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಅಭಿಯೋಜನೆಯಲ್ಲಿ 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಅಭಿಯೋಜನೆ ಪರ ವಿಚಾರಣೆ ಹಾಗೂ ವಾದವನ್ನು ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ಮಂಡಿಸಿದ್ದರು.

ನ್ಯಾಯವಾದಿಯಿಂದ ಸಾಕ್ಷ್ಯ ಆರೋಪಿಗಳು ಮಗುವನ್ನು ಪಡೆದುಕೊಳ್ಳಲು ದಾಖಲಾತಿಯ ಕುರಿತು ನ್ಯಾಯವಾದಿಯೋರ್ವರಲ್ಲಿಯೂ ಸಲಹೆ ಪಡೆದುಕೊಂಡಿದ್ದರು. ಈ ಬಗ್ಗೆ ಆ ನ್ಯಾಯವಾದಿಯವರು ಕೂಡ ಪ್ರಾಸಿಕ್ಯೂಷನ್‌ ಪರ ಸಾಕ್ಷ್ಯ ನುಡಿದಿದ್ದರು. ಇದು ಪ್ರಕರಣಕ್ಕೆ ಬಲ ನೀಡಿದೆ. ಚೈಲ್ಡ್‌ ಲೈನ್‌ನ ಅಸುಂತಾ ಡಿ’ಸೋಜಾ ಸರಿತಾ ಮೊದಲಾದವರು ಈ ಪ್ರಕರಣದಲ್ಲಿ ತುಂಬಾ ಸಹಕರಿಸಿದ್ದಾರೆ ಎಂದು ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ತಿಳಿಸಿದ್ದಾರೆ.

ಆಕೆ ಕಲ್ಲಿನ ಕ್ವಾರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಪತಿ ಕೂಡ ಅಲ್ಲಿಯೇ ಚಾಲಕನಾಗಿ ದುಡಿಯುತ್ತಿದ್ದರು. ಪ್ರಕರಣ ದಾಖಲಾದ ಅನಂತರ ರಂಗವ್ವ ಮಗುವನ್ನು ತನಗೆ ಮರಳಿಸಬೇಕೆಂದು ಕೇಳಿಕೊಂಡಿದ್ದಳು. ಅದರಂತೆ ಅವಳ ವಶಕ್ಕೆ ನೀಡಲಾಗಿತ್ತು. ಪ್ರಕರಣದ ವಿಚಾರಣೆಯ ವೇಳೆ ಆಕೆ ಮೃತಪಟ್ಟಿದ್ದಳು. ಆದರೆ ಮಾರಾಟಕ್ಕೆ ಯತ್ನಿಸಲಾಗಿದ್ದ ಮಗು ಅನಂತರ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಸ್ವಯಂ ಸೇವಾ ಸಂಸ್ಥೆಯವರಾಗಲಿ, ಪೊಲೀಸರಾಗಲಿ ಮಾಹಿತಿ ಪಡೆದುಕೊಂಡಿಲ್ಲ. ನ್ಯಾಯಾಲಯದಲ್ಲಿ ಮಗು ಮಾರಾಟದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆದು ಆರೋಪಿಗಳಿಗೆ ಶಿಕ್ಷೆಯಾಗಿದೆ. ಮಗು ಎಲ್ಲಿದೆ, ಯಾರ ಬಳಿಯಲ್ಲಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ರಂಗವ್ವನ ಕುಟುಂಬ ಬಗ್ಗೆಯೂ ಸದ್ಯ ಯಾವುದೇ ಮಾಹಿತಿ ಪೊಲೀಸರಿಗೆ ದೊರೆತಿಲ್ಲ. ಮಗುವಿನ ಕುರಿತು ಯಾರು ಕೂಡ ದೂರು ನೀಡಿಲ್ಲವಾದ್ದರಿಂದ ಅದು ಎಲ್ಲಿದೆ ಎಂಬ ಬಗ್ಗೆ ಪತ್ತೆ ಕಾರ್ಯಾಚರಣೆ ಕೂಡ ನಡೆಸಿಲ್ಲ.

ಆರೋಪಿಗಳು ಈ ಹಿಂದೆಯೂ ಇದೇ ರೀತಿ ಮಕ್ಕಳನ್ನು ವಿದೇಶದಲ್ಲಿರುವವರಿಗೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಪ್ರಕರಣಗಳು ದಾಖಲಾಗಿಲ್ಲ.

ಗರ್ಭಿಣಿಯಾಗಿರುವಾಗಲೇ ಬ್ರೈನ್‌ವಾಶ್‌ ಪಜೀರಿನಲ್ಲೇ ರಂಗವ್ವ ವಾಸವಾಗಿದ್ದಳು. ಆರೋಪಿಗಳ ಮನೆಯೂ ಪಜೀರಿನಲ್ಲೇ ಇತ್ತು. ಆರೋಪಿಗಳು ಆಕೆಯ ಮಗುವನ್ನು ಪಡೆದು ಮಾರಾಟ ಮಾಡುವ ಉದ್ದೇಶದಿಂದ ಮೊದಲೇ ಯೋಜನೆ ರೂಪಿಸಿದ್ದರು. ಆಕೆ ಗರ್ಭಿಣಿಯಾದಾಗಲೇ ಆಕೆಯ ಮನವೊಲಿಸಿ ಮಗುವನ್ನು ತಮಗೆ ನೀಡುವಂತೆಯೂ ಅದಕ್ಕೆ ಪ್ರತಿಯಾಗಿ ಹಣ ಕೊಡುವುದಾಗಿಯೂ ತಿಳಿಸಿದ್ದರು. ರಂಗವ್ವ ಹಣದಾಸೆಗೆ ಮಗುವನ್ನು ನೀಡಿದ್ದಳು.