Home Latest ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ...

ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಮಂಗಳೂರು: ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ (88) ಅವರು ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಅವರ ಹಿರಿಯ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಹಾಗೂ ಅಕಾಡೆಮಿಯ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸೂರಿಕುಮೇರು ಗೋವಿಂದ ಭಟ್‌ ಯಕ್ಷಗಾನದಿಂದ ನಿವೃತ್ತಿಯಾದ ಬಳಿಕ ತೀರ್ಥಹಳ್ಳಿ ಮತ್ತು ಬಿ.ಸಿ.ರೋಡಿನ ‌ಅಜ್ಜಿಬೆಟ್ಟಿನಲ್ಲಿರುವ ಪುತ್ರರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋವಿಂದ ಭಟ್ಟರು ಕೆಲವು ಸಮಯಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಿರಿಯ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ 9.10ರ ವೇಳೆ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬದ ಮೂಲದವರು ಮಾಹಿತಿ ನೀಡಿದ್ದಾರೆ.

ಸೂರಿಕುಮೇರು ಗೋವಿಂದ ಭಟ್‌ ಯಕ್ಷಗಾನ ರಂಗದಲ್ಲಿ ಮೂಲ್ಕಿ, ಕೂಡ್ಲು, ಸುರತ್ಕಲ್‌, ಇರಾ ಮೇಳಗಳಲ್ಲಿ ಕೆಲಸ ಮಾಡಿದ ಬಳಿಕ ದೀರ್ಘಾವಧಿ ಕಾಲ (55 ವರ್ಷ) ಧರ್ಮಸ್ಥಳ ಮೇಳದಲ್ಲಿ ವೃತ್ತಿ ಬದುಕು ನಿರ್ವಹಿಸಿದ ಅವರು ಮೂವರು ಪುತ್ರರು ಹಾಗೂ ಕುಟುಂಬ ವರ್ಗದವರು, ಯಕ್ಷಾಭಿಮಾನಿಗಳ ಅಗಲಿದ್ದಾರೆ. ಗೋವಿಂದ ಭಟ್ಟರ ಪತ್ನಿ ಸಾವಿತ್ರಿ‌ ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಸಹಕಲಾವಿದರಿಂದ ಗುರು ಗೋವಿಂದ ಭಟ್ಟರು ಎನಿಸಿಕೊಂಡ ಅವರು, ಆರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿಯೂ ಸೈ ಎನಿಸಿಕೊಂಡರು. ಬಳಿಕ ವೈವಿಧ್ಯಮಯ ಪಾತ್ರ ನಿರ್ವಹಣೆ ಮೂಲಕ ಯಾವ ವೇಷಕ್ಕೂ ಸೈ ಎಂದು ಮೇಳಕ್ಕೆ ಅನಿವಾರ್ಯರಾದರು. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ , ಮಾಗಧ, ಶಿಶುಪಾಲ ಪಾತ್ರ ಅವಿಸ್ಮರಣೀಯ. ನಾನಾ ಪಾತ್ರಗಳಿಂದ ಪ್ರಖ್ಯಾತ : ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಗೋವಿಂದ ಭಟ್‌ ಅವರು ವಿಶೇಷವಾಗಿ ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮುಂತಾದ ನಾನಾ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಪಾತ್ರ ಪ್ರಸಿದ್ಧ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಅದ್ಭುತ ಅರ್ಥಗಾರಿಕೆ, ಶಿಸ್ತುಬದ್ಧ ನೃತ್ಯ ಮತ್ತು ವಚೋವೈಖರಿಗೆ 2016ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಸಂಘ, ಸಂಸ್ಥೆಗಳಿಂದ ಸನ್ಮಾನ, ಬಿರುದುಗಳು ಸಂದಿವೆ.

ಗೋವಿಂದ ಭಟ್ಟರ ಬಾಲ್ಯ: ಕಿನಿಲ ಶಂಕರನಾರಾಯಣ ಭಟ್ಟ ಮತ್ತು ಲಕ್ಷ್ಮೀ ಅಮ್ಮ ದಂಪತಿ ಪುತ್ರನಾಗಿ 1940, ಮಾರ್ಚ್‌ 22ರಂದು ಜನಿಸಿದ ಭಟ್ಟರು, ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ಕಲಿತರು. ಏ.26, 1966ರಂದು ಸಾವಿತ್ರಿ ಅವರೊಂದಿಗೆ ವಿವಾಹ. ಮೂವರು ಪುತ್ರರು.

ಬಾಲ್ಯದಲ್ಲೇ ಸಂಕಷ್ಟದ ಜೀವನ ಧೈರ್ಯದಿಂದ ಎದುರಿಸಿದ ಭಟ್ಟರು, ಯಕ್ಷ ಗಾನಕ್ಕೆ ಜೀವನೋಪಾಯಕ್ಕಾಗಿ ಸೇರಿದರೂ ಬಳಿಕ ಹಿರಿಯ ಕಲಾವಿದರಿಂದ ಪಳಗಿ ರಂಗಸ್ಥಳದ ರಾಜನಾಗಿ ಮೆರೆದರು. ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್‌, ಮಾಧವ ಮೆನನ್‌ ಮತ್ತು ರಾಜನ್‌ ಅಯ್ಯರ್‌ ಅವರಿಂದ ನಾಟ್ಯಾಭ್ಯಾಸ ಕಲಿತು 1951ರಲ್ಲಿ ಯಕ್ಷ ಗಾನ ಮೇಳಕ್ಕೆ ಸೇರ್ಪಡೆಗೊಂಡರು.

ಸೂರಿಕುಮೇರು ಗೋವಿಂದ ಭಟ್‌ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.