Home Karavali Karnataka ಉಡುಪಿ : ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಕ್ತದಾನ ಶಿಬಿರ….!!

ಉಡುಪಿ : ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಕ್ತದಾನ ಶಿಬಿರ….!!

ಉಡುಪಿ : ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ದಿನಾಂಕ 27.06. 2025 ರಂದು ರಕ್ತದಾನ ಶಿಬಿರವು ಉಡುಪಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳ ಕಚೇರಿ ಉಡುಪಿ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆ ಇದರ ವತಿಯಿಂದ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ. ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ರಕ್ತದಾನ ಮಹಾದಾನವಾಗಿದ್ದು, ಆಪತ್ತಿನಲ್ಲಿರುವ ಮತ್ತೊಬ್ಬರ ಜೀವ ಉಳಿಸಲು ಸಹಾಯ ಮಾಡುತ್ತದೆ. ಇಂತಹ ಕಾರ್ಯಕ್ಕೆ ಹೆಚ್ಚು ಜನರು ಮುಂದೆ ಬರಬೇಕು. ಸರಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳ ಒತ್ತಡ ನಡುವೆಯೂ ರಕ್ತದಾನದಂತಹ ಒಂದು ಉತ್ತಮ ಸಾಮಾಜಿಕ ಜವಾಬ್ದಾರಿ ಕಾರ್ಯವನ್ನು ಮಾಡಿರೋದು ಶ್ಲಾಘನೀಯ ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿಯಾದ ಶ್ರೀ ಅಬೀದ ಗದ್ಯಾಲ್, ಉಡುಪಿ ಜಿಲ್ಲಾ ಸರ್ಜನ್ ಡಾ: ಅಶೋಕ್, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಂಪಾರು ದಿನಕರ್ ಶೆಟ್ಟಿ ಮತ್ತು ಕೆಎಂಸಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ: ಶಮ್ಮಿ ಶಾಸ್ರಿ ಇವರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ 79 ಬಾರಿ ರಕ್ತದಾನ ಮಾಡಿದ ಕ್ರೀಡಾ ಇಲಾಖೆಯ ಮಂಜುನಾಥ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಮಹಿಳಾ ರಕ್ತದಾನಿಗಳನ್ನು ಈ ಸಮಾರಂಭದಲ್ಲಿ ಗುರುತಿಸಲಾಯಿತು.

ಈ ಕಾರ್ಯಕ್ರಮದ ಸಂಯೋಜಕರು ಹಾಗೂ 51 ಬಾರಿ ರಕ್ತದಾನ ಮಾಡಿದ ಶ್ರೀ ಯತೀಶ್ ಕಿದಿಯೂರು ಇವರನ್ನು ಮಾನ್ಯ ಜಿಲ್ಲಾಧಿಕಾರಿಯವರು ಸನ್ಮಾನಿಸಿದರು. ಈ ಶಿಬಿರದಲ್ಲಿ ದಾಖಲೆಯ ಒಟ್ಟು 161 ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರ ಮತ್ತು ಕೆಎಂಸಿ. ಯ ರಕ್ತ ನಿಧಿ ಕೇಂದ್ರಕ್ಕೆ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

ಕೊನೆಯಲ್ಲಿ ಯತೀಶ್ ಕಿದಿಯೂರವರು ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಯಿಂದ ತಯಾರಿಸಿದ ಹೂವಿನ ಕುಂಡದಲ್ಲಿ ಬೆಳೆದ ಗಿಡಗಳನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಉಡುಪಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಇದ್ದು ಇದನ್ನು ನೀಗಿಸುವ ಉದ್ದೇಶದಿಂದ ಸರಕಾರಿ ನೌಕರರನ್ನು ಒಗ್ಗೂಡಿಸಿ ನೌಕರರಿಗೆ ರಕ್ತದ ಬಗ್ಗೆ ತಿಳುವಳಿಕೆ ನೀಡಿ , ರಕ್ತ ನೀಡಲು ತಾವೇ ಮುಂದೆ ಬರುವ ಉದ್ದೇಶದಿಂದ ರಕ್ತದಾನ ಶಿಬಿರ ಆಯೋಜಿಸಿರುವುದಾಗಿ ಸಂಘಟಕರಾದ ಜಿಲ್ಲಾಧಿಕಾರಿಯವರ ಕಛೇರಿಯ ಶ್ರೀ ಯತೀಶ್ ಕಿದಿಯೂರು ಮತ್ತು ಶ್ರೀ ಸಂಪತ್ ಇವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.