Home Kundapura News ಕುಂದಾಪುರದಲ್ಲಿ ಪೇ ಪಾರ್ಕಿಂಗ್ ಟೆಂಡರ್ ವಿವಾದ: ಪುರಸಭೆ ನಿರ್ಧಾರಕ್ಕೆ ಕೇಶವ ಭಟ್ ವಿರೋಧ..!

ಕುಂದಾಪುರದಲ್ಲಿ ಪೇ ಪಾರ್ಕಿಂಗ್ ಟೆಂಡರ್ ವಿವಾದ: ಪುರಸಭೆ ನಿರ್ಧಾರಕ್ಕೆ ಕೇಶವ ಭಟ್ ವಿರೋಧ..!

ಕುಂದಾಪುರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಟೆಂಡರ್ ಕರೆದಿರುವ ವಿಷಯವು ಸಾರ್ವಜನಿಕರಲ್ಲಿ ಗಂಭೀರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪುರಸಭೆಯ ನಿರ್ಗಮಿತ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ “ಮಾಹಿತಿ ಕೊರತೆಯಿಂದ ಗೊಂದಲ ಉಂಟಾಗಿದೆ” ಎಂದು ಹೇಳಿರುವುದು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಪುರಸಭೆಯ ಮಾಜಿ ಸದಸ್ಯ ಕೇಶವ ಭಟ್ ಹೇಳಿದ್ದಾರೆ.

 

ಅವರು ನೀಡಿರುವ ಹೇಳಿಕೆಯಲ್ಲಿ, ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಪ್ರೈಓವರ್ ಕೆಳಗಿನ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪುರಸಭೆಗೆ ಟೆಂಡರ್ ಕರೆಯಲು ಅವಕಾಶ ಇಲ್ಲದಿರುವುದರಿಂದ ಕೆಲವು ಸರಕಾರಿ ಜಾಗಗಳನ್ನು ಗುರುತಿಸಿ ಟೆಂಡರ್ ಕರೆಯುವ ಬಗ್ಗೆ ಯೋಚಿಸಲಾಗಿತ್ತು ಮತ್ತು “ಆ ನಂತರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿತ್ತು” ಎಂದು ಹೇಳಿದ್ದಾರೆ. ಜೊತೆಗೆ ಲಯನ್ಸ್ ಕ್ಲಬ್ ಪ್ರೈಓವರ್ ಕೆಳಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದ್ದರೆಂದು ಕೂಡ ಉಲ್ಲೇಖಿಸಿದ್ದಾರೆ.

 

ಮೊದಲನೆಯದಾಗಿ, ಕುಂದಾಪುರ ಪುರಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರೈಓವರ್ ಕೆಳಗಿನ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಸಕ್ತಿ ಇದ್ದರೆ ಅದು ಸ್ವಾಗತಾರ್ಹ.

 

ಆದರೆ ಆ ಜಾಗ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದದ್ದಾಗಿರುವುದರಿಂದ ಅದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಪುರಸಭೆಯ ನಡುವಿನ ಆಡಳಿತಾತ್ಮಕ ವಿಚಾರವಾಗಿದೆ. ಈ ಸಮಸ್ಯೆಯನ್ನು ಸಂಬಂಧಿತ ಇಲಾಖೆಗಳ ನಡುವೆ ಚರ್ಚಿಸಿ ಪರಿಹರಿಸಬೇಕಾಗುತ್ತದೆ.

 

ಆದರೆ ಅಲ್ಲಿ ಟೆಂಡರ್ ಕರೆಯಲು ಸಾಧ್ಯವಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಗರದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪೇ ಪಾರ್ಕಿಂಗ್ ಟೆಂಡರ್ ಕರೆಯುವುದು ಸರಿಯಾದ ತರ್ಕವಲ್ಲ. ಅದರ ಮೇಲೆ “ಆ ನಂತರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿತ್ತು” ಎಂಬ ರೀತಿಯ ಹೇಳಿಕೆ ನೀಡುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಂತೆ ಕಾಣಿಸುತ್ತದೆ.

 

ಕೆಲವರು ಹೇಳುವಂತೆ ಈಗ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪಾರ್ಕಿಂಗ್ ಟೆಂಡರ್ ಕರೆಯುವುದು ತಾತ್ಕಾಲಿಕ ಕ್ರಮ ಮಾತ್ರ; ನಂತರ ಪ್ಲೈಓವರ್ ಕೆಳಗಿನ ಜಾಗದಲ್ಲಿ ಮಾತ್ರ ಶುಲ್ಕ ಸಂಗ್ರಹ ಮಾಡುವ ಯೋಜನೆ ಇದೆ ಎನ್ನುವುದು ವಾಸ್ತವಿಕತೆಯಿಂದ ದೂರವಾದ ಮಾತಾಗಿದೆ.

 

ಯಾವುದೇ ಗುತ್ತಿಗೆದಾರನು ಟೆಂಡರ್ ಮೂಲಕ ಒಪ್ಪಂದ ಮಾಡಿಕೊಂಡಿರುವ ಸ್ಥಳಗಳಲ್ಲಿ ವರ್ಷಕ್ಕೆ ಸಂಗ್ರಹವಾಗುವ ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಆದಾಯವನ್ನು ಬಿಟ್ಟು, ಟೆಂಡರ್ ವ್ಯಾಪ್ತಿಗೆ ಬಾರದ ಪ್ಲೈಓವರ್ ಕೆಳಗಿನ ಜಾಗದಲ್ಲಿ ಮಾತ್ರ ಶುಲ್ಕ ವಸೂಲಿ ಮಾಡಲು ಮುಂದಾಗುವುದು ಸಾಧ್ಯವಿಲ್ಲ.

 

ಇನ್ನೂ ಗಂಭೀರವಾದ ಸಂಗತಿ ಎಂದರೆ, ಒಂದು ವೇಳೆ ಟೆಂಡರ್ ಪಡೆದ ಗುತ್ತಿಗೆದಾರನು ಪ್ಲೈಓವರ್ ಅಡಿಯಲ್ಲಿ ಮಾತ್ರ ಶುಲ್ಕ ವಸೂಲಿ ಮಾಡದೆ, ಟೆಂಡರ್‌ನಲ್ಲಿ ನಮೂದಿಸಲಾದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ನಿಲ್ಲಿಸಲಾದ ವಾಹನಗಳಿಂದ ಶುಲ್ಕ ವಸೂಲಿಗೆ ಬಲವಂತವಾಗಿ ಮುಂದಾದರೆ ಅಧಿಕಾರಿಗಳಿಗೆ ಅದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಅದು ಟೆಂಡರ್ ಒಪ್ಪಂದದ ಭಾಗವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯವೂ ಸಾಮಾನ್ಯವಾಗಿ ಟೆಂಡರ್ ಪಡೆದ ಗುತ್ತಿಗೆದಾರನ ಪರವೇ ನಿಲ್ಲುವ ಸಾಧ್ಯತೆ ಇದೆ.

 

ಈ ರೀತಿಯ ಮೂಲಭೂತ ಆಡಳಿತಾತ್ಮಕ ಹಾಗೂ ಕಾನೂನು ವಿಚಾರಗಳನ್ನು ಕಡೆಗಣಿಸಿ ನೀಡಲಾಗುತ್ತಿರುವ ವಿವರಣೆಗಳು ನಿಜಕ್ಕೂ ಬಾಲಿಷತೆಯ ಪರಮಾವಧಿ ಎನ್ನಬೇಕಾಗಿದೆ.

 

ಕುಂದಾಪುರದಂತಹ ಪಟ್ಟಣದಲ್ಲಿ ಸಾರ್ವಜನಿಕರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಾರ್ಕಿಂಗ್ ವ್ಯವಸ್ಥೆ ಕುರಿತು ಪಾರದರ್ಶಕ ಹಾಗೂ ಸಮಗ್ರ ನಿರ್ಧಾರ ಕೈಗೊಳ್ಳುವುದು ಅತ್ಯಗತ್ಯ. ಆದ್ದರಿಂದ ಈ ವಿಷಯದಲ್ಲಿ ಪುರಸಭೆ ಆಡಳಿತವು ಸ್ಪಷ್ಟತೆ ನೀಡಬೇಕು ಹಾಗೂ ಸಾರ್ವಜನಿಕರ ಮೇಲೆ ಅನಗತ್ಯ ಭಾರವಾಗುವಂತಹ ಕ್ರಮಗಳನ್ನು ಮರುಪರಿಶೀಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.