Home Latest “ಗೋ ಬ್ಯಾಕ್ ಲಕ್ಷ್ಮೀ ಅಕ್ಕ” ಘೋಷಣೆ ಕೂಗಿ ಯುವ ಮೋರ್ಚಾ ಪ್ರತಿಭಟನೆ…!!

“ಗೋ ಬ್ಯಾಕ್ ಲಕ್ಷ್ಮೀ ಅಕ್ಕ” ಘೋಷಣೆ ಕೂಗಿ ಯುವ ಮೋರ್ಚಾ ಪ್ರತಿಭಟನೆ…!!

ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಣಿಪಾಲದಲ್ಲಿ ನಡೆದ ಘಟನೆ ವೇಳೆ ಕಾರ್ಯಕರ್ತರು “ಗೋ ಬ್ಯಾಕ್ ಲಕ್ಷ್ಮೀ ಅಕ್ಕ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲಾ ಪ್ರವಾಸದ ಅಂಗವಾಗಿ ಕೆಡಿಪಿ ಸಭೆಗೆ ಭಾಗವಹಿಸಲು ಬೆಳಿಗ್ಗೆ ಉಡುಪಿಯಿಂದ ಮಣಿಪಾಲಕ್ಕೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು ರಸ್ತೆಯ ಪಕ್ಕದಲ್ಲಿ ಸೇರಿ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.

ಜಿಲ್ಲೆಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವನ್ನು ಪ್ರತಿಭಟನಾಕಾರರು ಮಾಡಿದರು. ಅಲ್ಲದೆ, ಸಚಿವೆ ಅಪರೂಪವಾಗಿ ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಜನರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಯುವ ಮೋರ್ಚಾ ಕಾರ್ಯಕರ್ತರು ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಯೋಜನೆ ರೂಪಿಸಿಕೊಂಡಿದ್ದರು. ಈ ಹಿನ್ನೆಲೆ ಮಣಿಪಾಲದ ರಜತಾದ್ರಿ ಕಚೇರಿ ಮುಂಭಾಗದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಕಪ್ಪು ಬಾವುಟ ಪ್ರದರ್ಶನ ಕೈಬಿಟ್ಟು, “ಗೋ ಬ್ಯಾಕ್ ಲಕ್ಷ್ಮೀ ಅಕ್ಕ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಈ ನಡುವೆ ಸಚಿವೆ ಕಾರಿನಲ್ಲೇ ನೇರವಾಗಿ ಕೆಡಿಪಿ ಸಭೆಗೆ ತೆರಳಿದರು.