ಉಡುಪಿ: ಪ್ರಖ್ಯಾತ ಚುಟುಕು ಕವಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಉಪ್ಪುಂದ ಗಣೇಶ್ ವೈದ್ಯ (53) ಅವರು ಜನವರಿ 23ರಂದು ಹೃದಯಾಘಾತದಿಂದ ಉಡುಪಿಯಲ್ಲಿ ನಿಧನರಾದರು.
ಗಣೇಶ್ ವೈದ್ಯ ಚೆಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡಿದ್ದರು.
ಸಾಹಿತ್ಯ ಲೋಕದಲ್ಲಿ ತಮ್ಮ ವಿನೂತನ ಚುಟುಕು ಕವಿತೆಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಗಣೇಶ್ ವೈದ್ಯ ಅವರ ಪ್ರಕಟಿತ ಪುಸ್ತಕಗಳು ಓದುಗರ ಹೃದಯ ಗೆದ್ದಿದ್ದವು. ಸರಳ ಪದಗಳಲ್ಲಿ ಆಳವಾದ ಅರ್ಥ ಹೇಳುವ ಅವರ ಶೈಲಿ ಅಪಾರ ಜನಪ್ರಿಯತೆ ಪಡೆದಿತ್ತು.
ದ್ವಾರಕ ಚೆಸ್ ಸ್ಕೂಲ್ ನ ಸಂಸ್ಥಾಪಕರಾಗಿ, ಕುವೆಂಪು ಯೂನಿವರ್ಸಿಟಿಯ ಮಾಜಿ ಚೆಸ್ ಕೋಚ್ ಆಗಿಯೂ, ಜ್ಯೋತಿಷ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಸರನ್ನು ಮಾಡಿದ್ದ ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ–ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಗಣೇಶ್ ವೈದ್ಯ ಅವರ ಅಗಲಿಕೆಗೆ ಸಾಹಿತ್ಯ ಪ್ರೇಮಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.



