ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯ ರಣರಂಗವಾಗಿ ಮಾರ್ಪಟ್ಟಿದೆ. ಈ ಎರಡು ದೇಶಗಳ ಯುದ್ಧದ ಎಫೆಕ್ಟ್ ಜಾಗತಿಕ ವಿಮಾನಯಾನ ವಲಯಕ್ಕೂ ತಟ್ಟಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ನೆಲಿಸಿದ್ದ ಕನ್ನಡಿಗರು ಸೇರಿದಂತೆ ಹಲವು ಭಾರತೀಯರು ವಾಪಸ್ ಬರಲಾಗದೆ ಪರದಾಡುತ್ತಿದ್ದಾರೆ. ಇದರ ನಡುವೆ ಬದುಕು ಕಟ್ಟಿಕೊಳ್ಳಲು ಇರಾನ್ಗೆ ಹೋಗಿ ನಾಪತ್ತೆಯಾಗಿದ್ದ ಕನ್ನಡಿಗ ಸೇಫ್ ಆಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಚಿಕ್ಕಮಗಳೂರು ಕೊಪ್ಪದ ಹಿರೇಕೊಡಿಗೆ ನಿವಾಸಿ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮಾಹಿತಿ ನೀಡಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಕೆನ್ನಾಲಗೆಗೆ ಈಗ ಮಲೆನಾಡಿನ ಯುವಕನೊಬ್ಬ ಸಿಲುಕಿರುವ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ಯುವಕ ನಿಶ್ಚಿತ್ ಕಳೆದ ಕೆಲವು ದಿನಗಳಿಂದ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಮರ್ಚಂಟ್ ನೇವಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದ ನಿಶ್ಚಿತ್, ಕೇವಲ ಐದು ತಿಂಗಳ ಹಿಂದಷ್ಟೇ ಉದ್ಯೋಗದ ನಿಮಿತ್ತ ಇರಾನ್‌ಗೆ ತೆರಳಿದ್ದರು. ಆದರೆ, ಪ್ರಸ್ತುತ ಇರಾನ್ ಮತ್ತು ಇಸ್ರೇಲ್ ನಡುವೆ ಕ್ಷಿಪಣಿ ದಾಳಿ ಹಾಗೂ ಯುದ್ಧದ ವಾತಾವರಣ ತಾರಕಕ್ಕೇರಿದೆ. ಈ ಸಂಘರ್ಷದ ವಲಯದಲ್ಲಿ ಸಿಲುಕಿರುವ ನಿಶ್ಚಿತ್ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿರಲಿಲ್ಲ, ಈಗ ಯುವಕ ಸಂಪರ್ಕಕ್ಕೆ ಸಿಕ್ಕಿದ್ದಾನೆ ಮತ್ತು ಸುರಕ್ಷಿತವಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.



