Home Crime ಸೈಬರ್ ಅಪರಾಧಕ್ಕೆ ಬಳಸುತ್ತಿದ್ದ 15 ಬೇನಾಮಿ ಬ್ಯಾಂಕ್ ಖಾತೆ ಪತ್ತೆ : ಶಿವಮೊಗ್ಗದಲ್ಲಿ ಮೂವರ ಬಂಧನ…!!

ಸೈಬರ್ ಅಪರಾಧಕ್ಕೆ ಬಳಸುತ್ತಿದ್ದ 15 ಬೇನಾಮಿ ಬ್ಯಾಂಕ್ ಖಾತೆ ಪತ್ತೆ : ಶಿವಮೊಗ್ಗದಲ್ಲಿ ಮೂವರ ಬಂಧನ…!!

ಶಿವಮೊಗ್ಗ : ಸೈಬರ್ ಅಪರಾಧಗಳಿಗೆ ಬಳಕೆಯಾಗುತ್ತಿದ್ದ 15 ಬೇನಾಮಿ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪತ್ತೆಹಚ್ಚಿದ್ದು ಮೂವರನ್ನು ಬಂಧಿಸಿದ್ದಾರೆ.

‌ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ಜಗದೀಶ್ (43), ಚಿಕ್ಕಮಗಳೂರಿನ ಅರ್ಷಾದ್ (39), ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ (34) ಬಂಧಿತರು.

ಆರೋಪಿಗಳು ವಿವಿಧ ಬೇನಾಮಿ ಹೆಸರಿನಲ್ಲಿದ್ದ 15 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಈ ಖಾತೆಗಳ ಮೇಲೆ ದೇಶಾದ್ಯಂತ 352 ಕ್ಕೂ ಹೆಚ್ಚು ಸೈಬರ್ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ.

15 ಅಕೌಂಟ್ ಗಳಲ್ಲಿ ಸುಮಾರು 82 ಕೋಟಿ ರೂ. ಹಣ ವಂಚನೆಯಾಗಿರುವ ಬಗ್ಗೆ ಮಾಹಿತಿ ಇದೆ‌. ಸದ್ಯಕ್ಕೆ ವಂಚನೆಗೆ ಬಳಸಿದ 15 ಖಾತೆಗಳಲ್ಲಿ ಒಟ್ಟು 14 ಕೋಟಿ 71 ಲಕ್ಷ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ಡ್ರಾ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.‌

ಇದರಂತೆ, ಬ್ಯಾಂಕ್ ಖಾತೆಯನ್ನು ತೆರೆಮರೆಯಲ್ಲಿ ನಿಂತು ನಿರ್ವಹಣೆ ಮಾಡುತ್ತಿದ್ದ ಆರೋಪದಲ್ಲಿ ‌ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್, 11 ATM ಕಾರ್ಡ್, 9 QR Code Scanner, 15 Airtel SIM cards ವಶಕ್ಕೆ ಪಡೆಯಲಾಗಿದೆ. ‌

ವಿಲ್ಸನ್‌ ಎಂಬವರು ನೀಡಿದ್ದ ವಂಚನೆ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾಗ ಬೇನಾಮಿ ಖಾತೆಗಳ ಜಾಲ ಬಯಲಾಗಿದೆ. ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.