ಕಲಬುರಗಿ : ಇಪ್ಪತೈದು ಕೋಟಿ ರೂಪಾಯಿ ಮೊತ್ತದ ಟೆಂಡರ್ ಕೆಲಸ ಕೊಡಿಸುವುದಾಗಿ 1.25 ಕೋಟಿ ರೂ. ವಂಚಿಸಿದ ಆರೋಪದಡಿ ಕಲಬುರಗಿಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 20 ಕೋಟಿ ರೂ., ರಾಜ್ಯ ಸರ್ಕಾರದ 5 ಕೋಟಿ ರೂಪಾಯಿ ಮೊತ್ತದ ಟೆಂಡರ್ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ ಉಪ ಗುತ್ತಿಗೆದಾರನಿಂದ 1.25 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ರಾಜ್ಯದ ಸಚಿವರೊಬ್ಬರ ಅಳಿಯ ಸೇರಿದಂತೆ 5 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಲಕ್ಷ್ಮಿಕಾಂತ ಕಟ್ಟಿಮನಿ, ಸಂತೋಷ್ ನಾಯಕ, ಕಿರಣ್, ಶ್ರೀಧರ್ ಮತ್ತು ರವಿ ಮಾಲಿಪಾಟೀಲ್ ಅವರ ವಿರುದ್ದ ಗುತ್ತಿಗೆದಾರ ದೂರು ನೀಡಿದ್ದಾರೆ. 25 ಕೋಟಿ ರೂಪಾಯಿಯ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿದ್ದು, ಅವರ ಬೇಡಿಕೆಯಂತೆ 1.25 ಕೋಟಿ ರೂ.ಗಳನ್ನು ಆರೋಪಿ ಸಂತೋಷ್ ನಾಯಕ್ ಖಾತೆಗೆ ಉಪ ಗುತ್ತಿಗೆದಾರ ಜಮಾ ಮಾಡಿದ್ದರು. ಆದರೆ ವರ್ಕ್ ಆರ್ಡರ್ ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ 50 ಲಕ್ಷದ ಚೆಕ್ ನೀಡಿದ್ದು, ಆ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರ ದೂರು ನೀಡಿದ ಕಾರಣ ಪ್ರಕರಣ ದಾಖಲಾಗಿದೆ.