ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಸಾರ್ವಜನಿಕ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬೆಳಿಗ್ಗೆ ಬಂಟ್ವಾಳ ಪುಣಚ ಗ್ರಾಮದ ದಂಬೆ ಎಂಬಲ್ಲಿರುವ ಸಾರ್ವಜನಿಕ ತೋಡಿನಲ್ಲಿ ಯಾರೋ ವ್ಯಕ್ತಿಗಳು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ PSI ರತ್ನಕುಮಾರ್ ಅವರಿಗೆ ಮಾಹಿತಿ ಬಂದಿತ್ತು.
ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ನಾಲ್ವರು ವ್ಯಕ್ತಿಗಳು ಹೊಳೆಯಿಂದ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವುದು ಕಂಡುಬಂದಿದೆ. ಅವರನ್ನು ಹಿಡಿದು ವಿಚಾರಿಸಿದಾಗ ಬಂಟ್ವಾಳ ಪುಣಚ ಗ್ರಾಮದ ನಿವಾಸಿಗಳಾದ ವಿಶ್ವಾಸ್ ಹೆಚ್ (27), ಶಶಿಧರ (45), ಹರೀಶ್ ಅಜ್ಜಿನಡ್ಕ (35) ಮತ್ತು ಕೇಪು ಗ್ರಾಮದ ಪುಷ್ಪರಾಜ್ ಎನ್ (32) ಎಂದು ಗುರುತಿಸಲಾಗಿದೆ.
ಆರೋಪಿಗಳು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ದೃಢಪಟ್ಟಿದ್ದು, ಸ್ಥಳದಲ್ಲಿ ಮರಳು ತುಂಬಿದ್ದ KA-70-8785 ನೇ ನಂಬ್ರದ ಪಿಕಪ್ ವಾಹನ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



