Home Latest ಕೃಷಿ ಮತ್ತು ತೋಟಗಾರಿಕಾ ಮೇಳದ ಮೂಲಕ ಕೃಷಿಕರ ಬದುಕಿಗೆ ಆತ್ಮ ಸ್ಥೈರ್ಯ ದೊರಕುವಂತಾಗಲಿ : ಸಂಸದ...

ಕೃಷಿ ಮತ್ತು ತೋಟಗಾರಿಕಾ ಮೇಳದ ಮೂಲಕ ಕೃಷಿಕರ ಬದುಕಿಗೆ ಆತ್ಮ ಸ್ಥೈರ್ಯ ದೊರಕುವಂತಾಗಲಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ…!!

ಉಡುಪಿ: ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಇನ್ನಷ್ಟು ಪರಿಣಾಮಯಾಗಿ ರೈತಾಪಿ ವರ್ಗದವರಿಗೆ ತಲುಪಿಸಿ, ಅವರುಗಳನ್ನು ಸ್ವಾವಲಂಭಿಗಳನ್ನಾಗಿ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಮೇಳದ ಮೂಲಕ ಕೃಷಿಕರ ಬದುಕಿಗೆ ಆತ್ಮಸ್ಥೆರ್ಯ ದೊರಕುವಂತಾಗಬೇಕು. ನೇಗಿಲ ಯೋಗಿಯ ಶ್ರಮಕ್ಕೆ ಆಧುನಿಕ ತಂತ್ರಜ್ಞಾದ ಬೆಳಕು ಸಿಗಲಿ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಸ್ತುತ ಜೀವನಮಟ್ಟ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೃಷಿಯಲ್ಲಿಯೂ ಸಹ ಅನೇಕ ಬದಲಾವಣೆಗಳು ಕಾಣುತ್ತಿದ್ದೇವೆ. ಇಂದು ಕೃಷಿ ಮೇಳದಲ್ಲಿ ಸುಮಾರು 100 ಕ್ಕೂ ಹೆಚ್ಚು ಭತ್ತದ ತಳಿಗಳ ಪ್ರದರ್ಶನ ಮಾಡಲಾಗುತ್ತಿದೆ. ಕೃಷಿ ವರ್ಗದ ಮುಂದಿನ ತಲೆಮಾರುಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಇದು ಅವಕಾಶವಾಗಿದೆ ಎಂದರು.

ತೋಟಗಾರಿಕೆಯಲ್ಲಿ ಮಹತ್ತರ ಬದಲಾವಣೆಗಳನ್ನು ಇಂದು ನಾವು ಕಾಣುತ್ತಿದ್ದೇವೆ. ತೋಟಗಾರಿಕೆ ಬೆಳೆಗಳ ಜೊತೆಗೆ ಬಹುಬೆಳೆಗಳನ್ನು ಬೆಳೆಯುವ ಮೂಲಕ ಅನೇಕರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನಂಬಿ ಬದುಕಿದವರು ಸಮಾಜದಲ್ಲಿ ಹಾಳಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ ಎಂದರು.

ಹೊಸ ವ್ಯವಸ್ಥೆಗಳು, ಹೊಸ ತಳಿಗಳು, ನವೀನ ತಂತ್ರಜ್ಞಾನಗಳಿಂದಾಗಿ ಕೃಷಿಗೆ ಇನ್ನಷ್ಟು ಮಹತ್ವ ದೊರಕುವಂತಾಗಬೇಕು. ಪಿ.ಎಂ.ಜಿ.ಎಸ್.ವೈ ಯೋಜನೆಯಡಿ ಸರಕಾರಗಳು ಜಂಟಿಯಾಗಿ ನೀಡುವ ಸಹಾಯಧನ ಸೌಲಭ್ಯವನ್ನು ಜಿಲ್ಲೆಯಲ್ಲಿ ಗುರಿ ಮೀರಿ ಸಾಧನೆಯಾಗಿದೆ. ಕಾಶ್ಮೀರದಲ್ಲಿ ಬೆಳೆಯುವ ಕೇಸರಿಯನ್ನು ಜಿಲ್ಲೆಯ ಹೆಣ್ಣು ಮಗಳು ಶಿಥಿಲೀಕರಣ ಹವಾಮಾನ ವ್ಯವಸ್ಥೆಯಲ್ಲಿ ಬೆಳೆದಿರುವುದು ಕೃಷಿಗೆ ಶಕ್ತಿ ನೀಡಿರುವುದು ತಿಳಿಸುತ್ತವೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಪೂರ್ ಮಾತನಾಡಿ, ಕೃಷಿ ಪ್ರಧಾನವಾದ ದೇಶ ನಮ್ಮದು. ಡಿ.ದೇವರಾಜ ಅರಸು ರವರು ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕರಾವಳಿಯ ಸುಮಾರು 6 ಲಕ್ಷ ಕುಟುಂಬಗಳನ್ನು ಭೂಮಿಯ ಮಾಲೀಕರನ್ನಾಗಿ ಮಾಡಿದ್ದಾರೆ.

ಕೃಷಿ ಪ್ರಧಾನವಾದ ಕರಾವಳಿ ಜಿಲ್ಲೆಗಳಲ್ಲಿ ಭತ್ತ, ಕಬ್ಬು, ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದ ಅವರು, ವಿದ್ಯಾರ್ಥಿ ಸಮುದಾಯ ಸಂಶೋದನೆ ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕು. ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಶೋಧನೆ ಮಾಡಲು ಇದೊಂದು ಸಂಶೋಧನಾ ಕೇಂದ್ರವಾಗಿ ಮತ್ತಷ್ಟು ಮೇಲ್ದರ್ಜೆಗೇರಬೇಕು ಎಂದರು.

ವಾರಾಹಿ ಯೋಜನೆಯ ನೀರಾವರಿ ಸೌಲಭ್ಯಗಳು ಇಲ್ಲಿನ ಬೆಳೆಗಳಿಗೆ ದೊರಕುವಂತಾಗಬೇಕು. ಸಣ್ಣ ಜಾಗದಲ್ಲಿಯೂ ಸಹ ವಿವಿಧ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಜಿಲ್ಲೆಯ ರೈತರು ತೋರಿಸಿಕೊಟ್ಟಿದ್ದಾರೆ. ರೈತರಿಗೆ ಪೂರಕವಾದ ಎಲ್ಲಾ ರೀತಿಯ ಬೆಂಬಲವನ್ನು ಅವರುಗಳಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡೋಣ ಎಂದ ಅವರು, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದಿಂದ ಬೆಂಬಲ ದೊರಕುವ ವಿಶ್ವಾಸವಿದೆ ಎಂದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಂ.ವಿ ಧನಂಜಯ ಅವರು, ಕೃಷಿಮೇಳದ ವೈಶಿಷ್ಟö್ಯತೆಯನ್ನು ವಿಶಿಷ್ಟ ರೀತಿಯಲ್ಲಿ ವರ್ಣಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಕರ್ನಾಟಕದ ಕೃಷಿ ಹೆಚ್ಚು ಲಾಭದಾಯವಾಗಿದೆ. ಹವಾಮಾನ ಸಹಿಷ್ಠುತೆ, ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತವಾಗಿಯೂ ನಾವುಗಳು ಮುಂದುವರೆಯಬೇಕು. ರೈತರು ಮೌಲ್ಯವರ್ಧನೆಗೆ ಇರುವ ಅವಕಾಶವನ್ನು ಬಳಸಿಕೊಂಡು ಉದ್ಯಮಿಗಳಾಗಿ ಹೊರಹೊಮ್ಮಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ “ಚಂದದ ಮನೆಯೊಡತಿಯಿಂದ ಅಂದದ ತಾರಸಿ ತೋಟ” ಎಂಬ ತಾಂತ್ರಿಕ ಕೈಪಿಡಿ ಮತ್ತು ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರನ್ನು ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ 2020-21 ರಿಂದ 2024-25 ರ ವರೆಗೆ ಪ್ರಥಮ ಸ್ಥಾನ ಪಡೆದು ವಿಜೇತರಾದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಕೆ.ಶಿ.ನಾ.ಕೃ.ತೋ.ವಿ.ವಿ ವ್ಯವಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರಾದ ಹೆಚ್.ಡಿ ದೇವಿ ಕುಮಾರ್, ಹೆಚ್.ಎಸ್ ಶಶಾಂಕ್, ಟಿ.ಬಸವರಾಜ ನಾಯ್ಕ್ ಹಾಗೂ ಡಾ. ಶಾಮರಾವ್ ಜಹಾಗೀರದಾರ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ವೈಕುಂಠ ಹೇರ್ಳೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮ ಜಿ.ಸಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ಕೆ.ಶಿ.ನಾ.ಕೃ.ತೋ.ವಿ.ವಿ ಶಿಕ್ಷಣ ನಿರ್ದೇಶಕ ಡಾ. ಬಿ ಹೇಮ್ಲಾ ನಾಯಕ್, ಸಂಶೋಧನಾ ನಿರ್ದೇಶಕ ಡಾ. ಶ್ರೀಧರ ಎಸ್, ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ ಮೆಸ್ತಾ, ಸಾರ್ವಜನಿಕರು, ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ಸ್ವಾಗತಿಸಿ, ಪ್ರವೀಣ್ ಎಸ್ ಕುಂಡಲ ನಿರೂಪಿಸಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ನವೀನ್ ಎನ್.ಈ ವಂದಿಸಿದರು.