Home Crime ಸುಳ್ಯ: ಗೋವು ಕಳ್ಳತನಕ್ಕೆ ಯತ್ನ : ಇಬ್ಬರ ಬಂಧನ, ಎರಡು ಕರುಗಳು ಹಾಗೂ ದ್ವಿಚಕ್ರ ವಾಹನ...

ಸುಳ್ಯ: ಗೋವು ಕಳ್ಳತನಕ್ಕೆ ಯತ್ನ : ಇಬ್ಬರ ಬಂಧನ, ಎರಡು ಕರುಗಳು ಹಾಗೂ ದ್ವಿಚಕ್ರ ವಾಹನ ವಶಕ್ಕೆ…!!

ಸುಳ್ಯ: ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕಳ್ಳತನ ಮಾಡಿ ಕೇರಳಕ್ಕೆ ಸಾಗಾಟ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಬೆಳಗಿನ ಜಾವ ಸುಮಾರು 4:10ರ ವೇಳೆಗೆ ಸುಳ್ಯದ ಗಾಂಧಿನಗರ ಶಾಲಾ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಸುಳ್ಯ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಇಬ್ಬರು ವ್ಯಕ್ತಿಗಳು ಎರಡು ಗಂಡು ಕರುಗಳ ಕುತ್ತಿಗೆಗೆ ಹಗ್ಗ ಕಟ್ಟಿ ಮೈದಾನದಲ್ಲಿನ ಕಂಬಕ್ಕೆ ಕಟ್ಟಿಹಾಕಿರುವುದು ಕಂಡುಬಂದಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಇಬ್ಬರನ್ನೂ ಸಿಬ್ಬಂದಿಗಳು ಹಿಡಿದು ವಿಚಾರಣೆ ನಡೆಸಿದ್ದಾರೆ.
ಬಂಧಿತರನ್ನು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಹಾಶಿರ್ (28) ಹಾಗೂ ಅರಂಬೂರು ನಿವಾಸಿ ಸಂಶುದ್ದೀನ್ (25) ಎಂದು ಗುರುತಿಸಲಾಗಿದೆ.

ಜಾನುವಾರುಗಳನ್ನು ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸಿ, ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನಕ್ಕೆ ಯತ್ನಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸರು ಸ್ಥಳದಲ್ಲಿದ್ದ ಎರಡು ಗಂಡು ಕರುಗಳು ಹಾಗೂ ಕೃತ್ಯಕ್ಕೆ ಬಳಸಲು ತಂದಿದ್ದ KA-03-HG-4083 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಎರಡು ಕರುಗಳ ಅಂದಾಜು ಮೌಲ್ಯ ₹4,000 ಹಾಗೂ ದ್ವಿಚಕ್ರ ವಾಹನದ ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.