ಮಂಗಳೂರು : ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಪಣಂಬೂರು ಎನ್.ಎಂ.ಪಿ.ಎ. ಬಳಿ ಸಂಭವಿಸಿದೆ.
ಮೃತರನ್ನು ಮಂಗಳೂರು ಪಾಂಡೇಶ್ವರ ನಿವಾಸಿ ಮುಹಮ್ಮದ್ ಆಸಿರ್ (18) ಎಂದು ತಿಳಿದು ಬಂದಿದ್ದು, ಇನ್ನೋರ್ವ ಸವಾರ ಮುಹಮ್ಮದ್ ಅಮೀರ್ ಗಂಭೀರ ಗಾಯಗೊಂಡು ನಗರದ ಎಜೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರು ತಮ್ಮ ದ್ವಿಚಕ್ರ ವಾಹನದಲ್ಲಿ ಬೈಕಂಪಾಡಿ ಕಡೆಯಿಂದ ಸರ್ವಿಸ್ ರಸ್ತೆಯಾಗಿ ಬಂದು ರಾಷ್ಟ್ರೀಯ ಹೆದ್ದಾರಿಗೆ ಬರುವಾಗ ಖಾಸಗಿ ಬಸ್ ಮರೋಳಿ ಡಿಕ್ಕಿ ಹೊಡೆಯಿತು.
ಘಟನೆಯಿಂದ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಆಸಿರ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಅಪಘಾತ ನಡೆಸಿದ ಬಸ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.



