ಬ್ರಹ್ಮಾವರ: ಯಾವುದೇ ಪರವಾನಿಗೆ ಇಲ್ಲದೆ ಸ್ವರ್ಣ ನದಿಯಿಂದ ಮರಳು ಕದ್ದು ಸಾಗಾಟ ಮಾಡುತ್ತಿದ್ದ ಟಾಟಾ 407 ಮಿನಿ ಟಿಪ್ಪರ್ ವಾಹನವನ್ನು ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 9 ಸಾವಿರ ರೂಪಾಯಿ ಮೌಲ್ಯದ 1.5 ಯುನಿಟ್ ಮರಳು ಅಕ್ರಮವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ.
ದಿನಾಂಕ 08/11/2026ರ ಬೆಳಗಿನ ಜಾವ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಬಗಿ ಅವರು ಸಿಬ್ಬಂದಿಯೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳಿಗ್ಗೆ 3:30 ಗಂಟೆಗೆ ಕೆ.ಜಿ. ರೋಡ್ ಕಮಾನು ಬಳಿ ಮರಳು ತುಂಬಿದ ಟಿಪ್ಪರ್ ವಾಹನವು ರಾಷ್ಟ್ರೀಯ ಹೆದ್ದಾರಿ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ.
ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ, KA-20-AB-7694 ನೋಂದಣಿ ಸಂಖ್ಯೆಯ ಟಾಟಾ 407 ಮಿನಿ ಟಿಪ್ಪರ್ನಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ. ಚಾಲಕ ಬೀರಪ್ಪನನ್ನು ವಿಚಾರಿಸಿದಾಗ, ಟಿಪ್ಪರ್ ಮಾಲೀಕ ಹಂಗಾರಕಟ್ಟೆಯ ಆಶೀಕ್ ಹಾಗೂ ಆತನ ಸ್ನೇಹಿತ ಪ್ರದೀಪ್ ಅವರ ಸೂಚನೆಯಂತೆ ಸ್ವರ್ಣ ನದಿಯ ಮರಳು ದಕ್ಕೆಗೆ ತೆರಳಿದ್ದಾಗಿ ತಿಳಿಸಿದ್ದಾನೆ.
ಅಲ್ಲಿ ಉಪ್ಪೂರಿನ ಪ್ರಜ್ವಲ್ ಹಾಗೂ ಕಾರ್ಮಿಕರು ಸ್ವರ್ಣ ನದಿಯಿಂದ ಮರಳನ್ನು ತೆಗೆದು ವಾಹನಕ್ಕೆ ತುಂಬಿಸಿಕೊಟ್ಟಿದ್ದು, ಬಳಿಕ ಆಶೀಕ್ ಮತ್ತು ಪ್ರದೀಪ್ ಕಾರಿನಲ್ಲಿ ಮುಂದೆ ಸಾಗಿದರೆ, ತಾನು ಮರಳು ತುಂಬಿದ ಟಿಪ್ಪರ್ನ್ನು ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಬಂದಿರುವುದಾಗಿ ಚಾಲಕ ಹೇಳಿದ್ದಾನೆ. ಮರಳು ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲವೆಂದು ಆತ ಒಪ್ಪಿಕೊಂಡಿದ್ದಾನೆ.
ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಿದ ಪೊಲೀಸರು, ಸುಮಾರು 9 ಸಾವಿರ ರೂಪಾಯಿ ಮೌಲ್ಯದ 1.5 ಯುನಿಟ್ ಮರಳು ಹಾಗೂ ಟಿಪ್ಪರ್ ವಾಹನವನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿದ್ದಾರೆ.
ಸರ್ಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ರಾಜಧನ ಪಾವತಿಸದೆ ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2026ರಂತೆ Mines and Minerals Act, ಕರ್ನಾಟಕ ಸಣ್ಣ ಖನಿಜ ನಿಯಮಗಳು ಹಾಗೂ BNS ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


