ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ಸಮೀಪ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾದ ಘಟನೆ ರಾತ್ರಿ ಸಂಭವಿಸಿದೆ
ಅಕ್ಷಯ ನಿಲಯ, ಗರೋಡಿ ಜಪ್ಪು ನಿವಾಸಿ ಸುಜಾತಾ ಸಿ. ಪಾಟೀಲ್ ಅವರು ಸರ ಕಳೆದುಕೊಂಡ ಮಹಿಳೆ ಎಂದು ತಿಳಿಯಲಾಗಿದೆ.
ಪತಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರತಿದಿನ ಸಂಜೆ ಮಂಗಳಾದೇವಿ ದೇವಸ್ಥಾನದ ಬಳಿಯ ಜ್ಯೂಸ್ ಅಂಗಡಿಯಿಂದ ಜ್ಯೂಸ್ ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದ ಅವರು, ರಾತ್ರಿ ಸುಮಾರು 7:55ಕ್ಕೆ ಅಂಗಡಿಗೆ ತೆರಳಿದ್ದರು. ಬಳಿಕ ರಾತ್ರಿ 8:35ರ ಸುಮಾರಿಗೆ ಪಪ್ಪಾಯ ಜ್ಯೂಸ್ ಪಡೆದು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ವೇಳೆ ಪಾಂಡೇಶ್ವರ ರಸ್ತೆಯ ಕಡೆಯಿಂದ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಸಮೀಪ ಬಂದಿದ್ದಾರೆ.
ಈ ವೇಳೆ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ತಾಳಿ ಸಮೇತವಿದ್ದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡಿದ್ದಾನೆ. ಮಹಿಳೆ ಕೂಗಿಕೊಳ್ಳುವಷ್ಟರಲ್ಲಿ ಇಬ್ಬರೂ ಬೈಕ್ನಲ್ಲಿ ಮಂಗಳಾದೇವಿ ರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ.
ಕಳವಾದ ಚಿನ್ನದ ಸರವು ತಾಳಿ ಸಮೇತ ಸುಮಾರು 15 ಗ್ರಾಂ ತೂಕ ಹೊಂದಿದ್ದು, ಅಂದಾಜು ₹1.50 ಲಕ್ಷ ಮೌಲ್ಯದ್ದಾಗಿದೆ. ಸರ ಕಿತ್ತುಕೊಳ್ಳುವ ಸಂದರ್ಭದಲ್ಲಿ ಮಹಿಳೆಯ ಕುತ್ತಿಗೆಗೆ ತರಚಿದ ಗಾಯವಾಗಿದ್ದು, ಬಲಭಾಗದಲ್ಲಿ ನೋವುಂಟಾಗಿದೆ.
ಬೈಕ್ ಸವಾರ ಮುಖಕ್ಕೆ ಮಾಸ್ಕ್ ಧರಿಸಿದ್ದು, ಹಿಂಬದಿ ಸವಾರ ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ.
ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಅಪರಿಚಿತ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.



