ಕುಂದಾಪುರ: ಮದ್ಯಪಾನದ ಚಟ ಹೊಂದಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಕ್ಲಾಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಹಕ್ಲಾಡಿ ಗ್ರಾಮದ ಕೆಳಾಕಳಿ ಮಾರಿಕಾಂಬಾ ದೇವಸ್ಥಾನದ ಸಮೀಪದ ನಿವಾಸಿ ಜೀವನ (27) ಎಂದು ಗುರುತಿಸಲಾಗಿದೆ.
ಜೀವನ ಅವರು ಬೆಂಗಳೂರಿನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 15 ದಿನಗಳ ಹಿಂದೆ ಊರಿಗೆ ಮರಳಿದ್ದರು. ನವೆಂಬರ್ 8ರಂದು ಮದ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದ ಅವರು, ಸಂಜೆ 7ರಿಂದ 7:15ರ ನಡುವಿನ ಅವಧಿಯಲ್ಲಿ ಮನೆಯ ಕೋಣೆಯ ಪಕಾಸಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಸುಮಾರು 1:10ರ ವೇಳೆಗೆ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಾಗಿದೆ.



