Home Crime ಮಗನ ಬದುಕಿಸಲು ಹೋದ ತಾಯಿಗೂ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ದಾರುಣ ಮೃತ್ಯು…!!

ಮಗನ ಬದುಕಿಸಲು ಹೋದ ತಾಯಿಗೂ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ದಾರುಣ ಮೃತ್ಯು…!!

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ಬಟ್ಟೆ ಒಣಗಿಸುವಾಗ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟು ಎಂಬಲ್ಲಿ ಇಂದು ಸಂಭವಿಸಿದೆ.

ಮೃತರನ್ನು ಮರ್ಸಿ ಮಸ್ಕರೇನಸ್ (45) ಮತ್ತು ಅವರ ಪುತ್ರ ಶೋನ್ ಮಸ್ಕರೇನಸ್ (18) ಎಂದು ತಿಳಿಯಲಾಗಿದೆ.

ಮನೆಯಂಗಳದಲ್ಲಿ ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ಶೋನ್ ಸ್ನಾನದ ನಂತರ ಒದ್ದೆ ಬಟ್ಟೆ ಒಣಗಿಸಲು ಹೋಗುವಾಗ ಮೊದಲು ವಿದ್ಯುತ್ ಶಾಕ್ ಹೊಡೆದಿದ್ದು, ಕಿರುಚಿಕೊಂಡಿದ್ದಾನೆ. ಮಗನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆ ಬುಧವಾರ ಸಂಜೆ 6.30 ರಿಂದ 7 ಗಂಟೆಯ ನಡುವೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಗುರುವಾರ ಬೆಳಿಗ್ಗೆ 7-8 ಗಂಟೆ ಸುಮಾರಿಗೆ ತೋಟದ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಗೊತ್ತಾಗಿದೆ.

ಮೃತ ಶೋನ್ ಮೂಡುಬಿದಿರೆ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಮೂಡುಬಿದಿರೆ ಪೊಲೀಸರು ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.