Home Latest ಉಡುಪಿ: ಪಟಾಕಿ ಮಳಿಗೆ ಹರಾಜಿಗೆ ಹೈಕೋರ್ಟ್ ತಡೆ…!

ಉಡುಪಿ: ಪಟಾಕಿ ಮಳಿಗೆ ಹರಾಜಿಗೆ ಹೈಕೋರ್ಟ್ ತಡೆ…!

ಉಡುಪಿ : ಉಡುಪಿ ನಗರದ ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ವಹಿಸಿಕೊಡಲು ನಗರಸಭೆ ನಡೆಸಲು ಉದ್ದೇಶಿಸಿದ್ದ ಬಹಿರಂಗ ಹರಾಜು ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಉಡುಪಿ ನಗರಸಭೆಯು ನ.2ರಂದು ಹೊರಡಿಸಿದ್ದ ಅಲ್ಪಾವಧಿ ಮರು ಬಹಿರಂಗ ಹರಾಜು ಪ್ರಕಟಣೆಯಂತೆ (ಸಂಖ್ಯೆ: ಉನಸ. R1.ಸಿಆರ್.01/2026-27), ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ ಆರು ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ವಹಿಸಿಕೊಡಲು ನ.6ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬಹಿರಂಗ ಹರಾಜು ನಿಗದಿಪಡಿಸಲಾಗಿತ್ತು.

ಆದರೆ, ನಗರಸಭೆಯ ಈ ಹರಾಜು ಪ್ರಕಟಣೆಯನ್ನು ಪ್ರಶ್ನಿಸಿ ಜಯರಾಜ್ ಎಂಬವರು ವಕೀಲರಾದ ತನೋಜ್ ಕುಮಾರ್ ಹಾಗೂ ದಿಗಂತ್ ಜೈನ್ ಅವರ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (W.P. No.34308/2026) ಸಲ್ಲಿಸಿದ್ದರು.

ನ.5ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠವು, ನ.2ರ ಹರಾಜು ಪ್ರಕಟಣೆಯಡಿ ಕೈಗೊಳ್ಳಬೇಕಿದ್ದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನ.6ರಂದು ನಡೆಯ ಬೇಕಿದ್ದ ಆರು ತಾತ್ಕಾಲಿಕ ಪಟಾಕಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಕುರಿತು ಸಾರ್ವಜನಿಕರು ಹಾಗೂ ಹರಾಜಿನಲ್ಲಿ ಭಾಗವಹಿಸಲು ಉದ್ದೇಶಿಸಿದ್ದ ಬಿಡ್ಡುದಾರರು ಗಮನಹರಿಸುವಂತೆ ತಿಳಿಸಲಾಗಿದೆ.