ಕುಂದಾಪುರ: ವ್ಯವಹಾರದಲ್ಲಿ ನಷ್ಟ ಮತ್ತು ಸಾಲ ಮರುಪಾವತಿ ಒತ್ತಡದಿಂದ ಮನನೊಂದ ಕ್ಯಾಟರಿಂಗ್ ಉದ್ಯಮಿಯೊಬ್ಬರು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಕರಿಕಲ್ ಕಟ್ಟೆಯಲ್ಲಿ ನಡೆದಿದೆ.
ಮೃತಪಟ್ಟವರು ಜಪ್ತಿ ಗ್ರಾಮದ ಕರಿಕಲ್ ಕಟ್ಟೆ ನಿವಾಸಿ ದಿವಾಕರ ಕೃಷ್ಣ ಶೆಟ್ಟಿ (34). ಇವರು ಮೂಲತಃ ಹುಲ್ಗಾರ ಶಿರಸಿ ನಿವಾಸಿ ಬಾಲರಾಜ್ ಕೆ ಶೆಟ್ಟಿ (32) ಅವರ ಅಣ್ಣ ಎಂದು ತಿಳಿದು ಬಂದಿದೆ.
ದಿವಾಕರ ಅವರು ತನ್ನ ಅತ್ತೆ ಮನೆಯಾದ ಕರಿಕಲ್ ಕಟ್ಟೆಯಲ್ಲಿ ವಾಸವಾಗಿದ್ದು ಕ್ಯಾಟರಿಂಗ್ ವ್ಯವಹಾರ ಮಾಡುತ್ತಿದ್ದರು. ವ್ಯವಹಾರಕ್ಕಾಗಿ ಬ್ಯಾಂಕ್ ಆಫ್ ಬರೋಡಾ ಕಂಡ್ಲೂರು ಶಾಖೆಯಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ವ್ಯವಹಾರದಲ್ಲಿ ನಷ್ಟ ಉಂಟಾಗಿ, ಹೃದಯ ಸಂಬಂಧಿ ಖಾಯಿಲೆಯೂ ಇದ್ದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗದೆ ಮನನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅ.30 ರಂದು ಮಧ್ಯಾಹ್ನ 3 ಗಂಟೆಗೆ ಮನೆಯಲ್ಲಿ ವಿಷ ಸೇವಿಸಿದ್ದ ಅವರನ್ನು ಮೊದಲು ಕುಂದಾಪುರ ಸರಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.31 ರಂದು ಸಂಜೆ 5:40ಕ್ಕೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



