Home Crime ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಹೊಳೆಯಲ್ಲಿ ಪತ್ತೆ…!!

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಹೊಳೆಯಲ್ಲಿ ಪತ್ತೆ…!!

ಕಾರ್ಕಳ: ನಾಲ್ಕು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಳಿಕ ಹೊಳೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬೈಲೂರು ನಿವಾಸಿ ಗಣೇಶ್ ಪೂಜಾರಿ (54) ಎಂದು ಗುರುತಿಸಲಾಗಿದೆ.

ಗಣೇಶ್ ಪೂಜಾರಿ ಅವರು ಕಳೆದ ನಾಲ್ಕು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಾಯಿಲೆ ಗುಣಮುಖವಾಗದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಮೌನವಾಗಿರುತ್ತಿದ್ದರು ಎನ್ನಲಾಗಿದೆ.

ಅಕ್ಟೋಬರ್ 30ರಂದು ರಾತ್ರಿ ತಮ್ಮ ಮನೆಯಾದ ಕಾರ್ಕಳ ತಾಲೂಕಿನ ಬೈಲುಹಿತ್ಲುವಿನಲ್ಲಿ ಊಟ ಮಾಡಿ ಮಲಗಿದ್ದ ಗಣೇಶ್ ಅವರು, ಅಕ್ಟೋಬರ್ 31ರಂದು ಬೆಳಗಿನ ಜಾವ 4:30ರ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದರು.

ಬಳಿಕ ಅವರ ಸಹೋದರ ದಿನೇಶ್ ಸಾಲ್ಯಾನ್ (46) ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.

ನಾಪತ್ತೆಯಾಗಿದ್ದ ಗಣೇಶ್ ಪೂಜಾರಿ ಅವರ ಮೃತದೇಹ ನವೆಂಬರ್ 1ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬಾಳೆಹಿತ್ಲು ಎಂಬಲ್ಲಿ ಮೊರತ್ತಗುಂಡಿ ಹೊಳೆಯಲ್ಲಿ ಪತ್ತೆಯಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾನಸಿಕ ಕಾಯಿಲೆಯಿಂದ ಮನನೊಂದು ಗಣೇಶ್ ಅವರು ಅಕ್ಟೋಬರ್ 31ರ ಬೆಳಿಗ್ಗೆ 4:30ರಿಂದ ನವೆಂಬರ್ 1ರ ಬೆಳಿಗ್ಗೆ 11 ಗಂಟೆಯ ನಡುವಿನ ಅವಧಿಯಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.