ಉಡುಪಿ : ಇಂಧನ ಇಲಾಖೆಯ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಗ್ರಾಹಕರ ವಿದ್ಯುತ್ ಬಿಲ್ಲಿನಲ್ಲಿ ಪ್ರತಿ ಯೂನಿಟಿಗೆ 36 ಪೈಸೆ ವಸೂಲಿಗೆ ಮುಂದಾಗಿ ಗ್ರಾಹಕರಿಗೆ ದರ ಹೆಚ್ಚಳದ ಬರೆ ಎಳೆದ ರಾಜ್ಯ ಸರಕಾರದ ನಿರ್ಧಾರಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧ ಎಸ್ಕಾಂಗಳ ಮತ್ತು ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿಗಳ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡುವ ಉದ್ದೇಶಕ್ಕೆ ಸರಕಾರದ ವಂತಿಗೆಯನ್ನು ವಿದ್ಯುತ್ ಬಳಕೆದಾರರ ಬಿಲ್ ಗಳಲ್ಲಿ ವಸೂಲಿ ಮಾಡುತ್ತಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೇ ತಿಂಗಳಿನ ಬಿಲ್ನಲ್ಲಿ ಗ್ರಾಹಕರಿಗೆ ಈ ಬಾಬ್ತು ಯೂನಿಟ್ ಒಂದಕ್ಕೆ 36 ಪೈಸೆಯಂತೆ ತಿಂಗಳೊಂದಕ್ಕೆ ನೂರಾರು ರೂಪಾಯಿಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ.
ಇಂಧನ ಇಲಾಖೆ ಯ ಸಿಬ್ಬಂದಿಗಳಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡುವ ಉದ್ದೇಶಕ್ಕೆ ಸರಕಾರದ ವಂತಿಕೆಯಾಗಿ ನೀಡುತ್ತಿದ್ದ ಸುಮಾರು ವಾರ್ಷಿಕ ೨,೮೦೦ ಕೋಟಿ ರೂಪಾಯಿಗಳನ್ನು ವಿದ್ಯುತ್ ಬಳಕೆದಾರರ ಮಾಸಿಕ ಬಿಲ್ಗಳಿಂದ ವಸೂಲಿ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.
ವಿದ್ಯುತ್ ದರ ಹೆಚ್ಚಳದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸರ್ಕಾರದ ಈ ನಿರ್ಧಾರದಿಂದ ಮತ್ತಷ್ಟು ಹೊರೆ ಹೆಚ್ಚಿಸಿದಂತಾಗುತ್ತದೆ.
ಸರ್ಕಾರ ತಕ್ಷಣ ತನ್ನ ಆದೇಶವನ್ನು ಹಿಂಪಡೆದು ಇಂಧನ ಇಲಾಖೆಯ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಗ್ರಾಹಕರ ವಿದ್ಯುತ್ ಬಿಲ್ನಿಂದ ವಸೂಲಿ ಮಾಡದೆ, ಹಿಂದಿನಂತೆ ಸರಕಾರ ಭರಿಸಲು ಕ್ರಮ ವಹಿಸುವಂತೆ ಇಂಧನ ಇಲಾಖೆ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ರವರು ಪತ್ರ ಬರೆದು ಮನವಿ ಮಾಡಿದ್ದಾರೆ.