ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಳ ಬಳಿ ರಸ್ತೆಯ ಬದಿಯಲ್ಲಿರುವ ಅಂಗಡಿಯ ಹೊರಜಗುಲಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆಲವು ತಿಂಗಳುಗಳಿಂದ ಅಂಗಡಿಯ ಮಾಲೀಕರು ವ್ಯಾಪಾರ ಸ್ಥಗಿತಗೊಳಿಸಿ, ಅಂಗಡಿಯನ್ನು ಮುಚ್ಚಿಟ್ಟಿದ್ದರು. ಅಂಗಡಿ ಆವರಣವನ್ನು ಸ್ವಚ್ಛಗೊಳಿಸಲು ಮಾಲೀಕರು ಬಂದಾಗ ಹೊರಜಗುಲಿಯಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿ ಮೃತಪಟ್ಟಿದ್ದು ಸುಮಾರು ಹತ್ತು ದಿನಗಳಾಗಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಇನ್ನೂ ತಿಳಿದುಬಂದಿಲ್ಲ.
ಮೃತರ ವಾರಸುದಾರರು ಕಾಪು ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಅರುಣ್ ಉಪ್ಪೂರು ಹಾಗೂ ಆರಕ್ಷಕ ಸಿಬ್ಬಂದಿ ಶಿವ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ತೆರವುಗೊಳಿಸಿ, ಉಡುಪಿ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.



