Home Uncategorized ಕೆರೆ ಅಭಿವೃದ್ಧಿಯಾಯ್ತಾ? ಕೆರೆಯೇ ಅಭಿವೃದ್ಧಿಗೆ ಬಲಿಯಾಯ್ತಾ? : ಕೋಟ ನಾಗೇಂದ್ರ ಪುತ್ರನ್ ಪ್ರಶ್ನೆ….!!

ಕೆರೆ ಅಭಿವೃದ್ಧಿಯಾಯ್ತಾ? ಕೆರೆಯೇ ಅಭಿವೃದ್ಧಿಗೆ ಬಲಿಯಾಯ್ತಾ? : ಕೋಟ ನಾಗೇಂದ್ರ ಪುತ್ರನ್ ಪ್ರಶ್ನೆ….!!

ಕೋಟ: ಕಾರಂತರ ಹೆಸರಿನಲ್ಲಿ ಪಾರ್ಕ್, ಪರಂಬೊಕು ಕೆರೆಯ ಹೆಸರಿನಲ್ಲಿ ಪ್ರಶ್ನೆಗಳು! ದಾಖಲೆಗಳು ನಮ್ಮ ಕೈಯಲ್ಲಿವೆ, ಉತ್ತರ ಮಾತ್ರ ಅಧಿಕಾರಿಗಳ ಬಾಯಲ್ಲಿಲ್ಲ!

ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ವಿಚಾರದಲ್ಲಿ ಈಗ ಕೇಳಬೇಕಾಗಿರುವುದು ಒಂದೇ ಒಂದು ಪ್ರಶ್ನೆ: ಇಲ್ಲಿ ನಿಜವಾಗಿಯೂ ಅಭಿವೃದ್ಧಿಯಾಗಿರುವುದು ಯಾರು?

ಒಂದು ಕಡೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹೆಸರು,ಮತ್ತೊಂದು ಕಡೆ ಪರಂಬೊಕು ಕೆರೆ.

ಕಾರಂತರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸುವುದಕ್ಕೆ ಯಾರ ವಿರೋಧವೂ ಇಲ್ಲ,ಆದರೆ ಒಂದು ಕೆರೆ ಅಥವಾ ಸಾರ್ವಜನಿಕ ಜಲಮೂಲದ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವ ಮೊದಲು ಕಾನೂನು ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಕಾರಂತರ ಹೆಸರಿಟ್ಟ ಮಾತ್ರಕ್ಕೆ ಕಟ್ಟಡಕ್ಕೆ ಸಾಂಸ್ಕೃತಿಕ ಗೌರವ ಸಿಗಬಹುದು; ಆದರೆ ಅದರಿಂದ ಭೂಮಿಯ ಕಾನೂನುಬದ್ಧ ಸ್ವರೂಪ ಬದಲಾಗುವುದಿಲ್ಲ!

ಪರಂಬೊಕು ಕೆರೆ ಎಂದರೆ ಯಾರ ಖಾಸಗಿ ಆಸ್ತಿಯಲ್ಲ!

ಪರಂಬೊಕು (Poramboke) ಎಂಬುದು ದಕ್ಷಿಣ ಭಾರತದ ಕಂದಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ಬಳಕೆ ಅಥವಾ ಖಾಸಗಿ ಸ್ವಾಮ್ಯಕ್ಕೆ ಸೇರದ ಭೂಮೀ ಎಂದು ಸೂಚಿಸಲು ಬಳಸುವ ಪದ.

ಸುಪ್ರೀಂ ಕೋರ್ಟ್ 2011ರಲ್ಲಿ ನೀಡಿದ Jagpal Singh v. State of Punjab ತೀರ್ಪಿನ ಪ್ಯಾರಾಗ್ರಾಫ್ 3ರಲ್ಲಿ ದಕ್ಷಿಣ ಭಾರತದ ಪರಂಬೊಕು ಭೂಮಿಯನ್ನು ಸಾರ್ವಜನಿಕ ಸಮುದಾಯದ ಬಳಕೆಯ ಭೂಮಿ ಎಂದು ಉದಾಹರಣೆಯಾಗಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕೆರೆ ಎಂದರೆ ಕೇವಲ ಮಳೆ ಬಂದಾಗ ನೀರು ನಿಲ್ಲುವ ಜಾಗವಲ್ಲ. ಅದು ಅಂತರ್ಜಲ ಮರುಪೂರಣದ ವ್ಯವಸ್ಥೆ, ಜಲಚರಗಳ ಬದುಕಿನ ನೆಲೆ, ಪಕ್ಷಿಗಳ ಆಶ್ರಯ ಮತ್ತು ಪ್ರಕೃತಿಯ ನೀರಿನ ಬ್ಯಾಂಕ್ ಎಂಬುದನ್ನು ಸ್ಥಳೀಯ ಸಂಸದರು ಹಾಗೂ ಚುನಾಯಿತಾ ಪ್ರತಿನಿಧಿಗೆ ಜವಾಬ್ದಾರಿ ಬೇಕು.

ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟರೆ ಬಡ್ಡಿ ಸಿಗುತ್ತದೆ. ಕೆರೆಯಲ್ಲಿ ನೀರು ಉಳಿಸಿದರೆ ಅಂತರ್ಜಲ ಸಿಗುತ್ತದೆ. ಆದರೆ ಕೆರೆಯ ಜಾಗವನ್ನೇ ಬೇರೆ ಉದ್ದೇಶಕ್ಕೆ ಬಳಸಿದರೆ ಮುಂದಿನ ಪೀಳಿಗೆಗೆ ನೀರಿನ ಬದಲು ಏನು ಕೊಡುತ್ತೇವೆ?

ಇಲ್ಲಿ ಮುಖ್ಯವಾದುದು ಈ ನಿರ್ದಿಷ್ಟ ಜಾಗದ ಸರ್ಕಾರಿ ದಾಖಲೆಗಳು ಏನು ಹೇಳುತ್ತವೆ ಎಂಬುದು. ಈ ಕುರಿತು ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಭೂ ದಾಖಲೆಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ.

ಹೀಗಾಗಿ ಈಗ ಪ್ರಶ್ನೆ ದಾಖಲೆ ಎಲ್ಲಿದೆ ಎಂಬುದಲ್ಲ. ದಾಖಲೆಗಳ ಪ್ರಕಾರ ಭೂಮಿಯ ಮೂಲ ಸ್ವರೂಪ ಏನು ಮತ್ತು ಆ ಸ್ವರೂಪಕ್ಕೆ ಅನುಗುಣವಾಗಿ ನಿರ್ಮಾಣ ಕಾರ್ಯ ನಡೆದಿದೆಯೇ ಎಂಬುದಾಗಿದೆ.

ಹೀಗಾಗಿ ನಮ್ಮ ಪ್ರಶ್ನೆಗಳು:

ಈ ಭೂಮಿ ಮೂಲತಃ ಯಾವ ಉದ್ದೇಶಕ್ಕೆ ಮೀಸಲಾಗಿತ್ತು?
ಜಿಲ್ಲಾಧಿಕಾರಿಯ ಅನುಮತಿ ಪಡೆದಿದ್ದಾರೆಯೇ?
ಸಂಬಂಧಪಟ್ಟ ಕೆರೆ ಪ್ರಾಧಿಕಾರದ ಅನುಮತಿ ಇದೆಯೇ?

ಸರ್ಕಾರಿ ಭೂಮಿ ಎಂದರೆ ಯಾರಿಗಾದರೂ ಬೇಕಾದಂತೆ ಬಳಸುವ ಖಾಲಿ ಜಾಗವಲ್ಲ. ಅದು ಸಾರ್ವಜನಿಕರ ಆಸ್ತಿ.
ಪ್ರಕೃತಿ, ನದಿ, ಕೆರೆ, ಅರಣ್ಯ ಮತ್ತು ಜೀವಜಂತುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ.ಹೀಗಿರುವಾಗ ಕೆರೆಯ ಬಗ್ಗೆ ಪ್ರಶ್ನೆ ಕೇಳುವ ನಾಗರಿಕರನ್ನು ಅಭಿವೃದ್ಧಿ ವಿರೋಧಿಗಳು ಎಂದು ಕರೆಯುವುದಕ್ಕಿಂತ, ಅವರ ಪ್ರಶ್ನೆಗಳಿಗೆ ದಾಖಲೆಗಳ ಮೂಲಕ ಉತ್ತರಿಸುವುದು ಉತ್ತಮ ಆಡಳಿತದ ಲಕ್ಷಣ.

ಕಾರಂತರ ಹೆಸರಿನಲ್ಲಿ ಪಾರ್ಕ್ – ಕಾರಂತರ ಪರಿಸರ ಪ್ರಜ್ಞೆಗೆ ಜಾಗ ಎಲ್ಲಿದೆ?

ಕೋಟ ಶಿವರಾಮ ಕಾರಂತರು ಕೇವಲ ಸಾಹಿತಿಯಲ್ಲ. ಅವರು ಪರಿಸರ, ಪ್ರಕೃತಿ, ಕಲೆ, ಸಾಹಿತ್ಯ, ಯಕ್ಷಗಾನ ಮತ್ತು ಸಾಮಾಜಿಕ ಚಿಂತನೆಗಳ ಪ್ರತೀಕ.

ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಿರುವುದು ಒಳ್ಳೆಯ ವಿಚಾರವಾಗಿರಬಹುದು. ಆದರೆ ಆ ಹೆಸರಿನ ಗೌರವ ಉಳಿಸಲು ಪರಿಸರ ಸಂರಕ್ಷಣೆಯೂ ಅಷ್ಟೇ ಮುಖ್ಯ.

ಕಾರಂತರ ಹೆಸರಿನಲ್ಲಿ ಪಾರ್ಕ್ ನಿರ್ಮಿಸುವುದು ಗೌರವ. ಆದರೆ ಕಾರಂತರ ಪರಿಸರ ಪ್ರಜ್ಞೆಗೆ ವಿರುದ್ಧವಾಗಿ ಏನಾದರೂ ನಡೆದಿದ್ದರೆ ಅದನ್ನು ಪ್ರಶ್ನಿಸುವುದೂ ಗೌರವವೇ.

ನಮ್ಮ ಪ್ರಶ್ನೆಗಳಿಗೆ ರಾಜಕೀಯ ಭಾಷಣಗಳ ಅಗತ್ಯವಿಲ್ಲ. ದಾಖಲೆಗಳೇ ಉತ್ತರ ನೀಡಲಿ.

ನಮ್ಮ ಅಂತಿಮ ನಿಲುವು – ಅಭಿವೃದ್ಧಿ ಬೇಕು,ಕಾರಂತ ಥೀಮ್ ಪಾರ್ಕ್ ಬೇಕು ಆದರೆ ಕೆರೆಯನ್ನು ಬಲಿಕೊಟ್ಟು ಅಲ್ಲ!

ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ದ್ವೇಷವಲ್ಲ. ಯಾವುದೇ ರಾಜಕೀಯ ಪಕ್ಷದ ವಿರುದ್ಧದ ಅಂಧ ವಿರೋಧವೂ ಅಲ್ಲ.

ಯಾವ ಪಕ್ಷ ಅಧಿಕಾರದಲ್ಲಿದ್ದರೂ ಸಾರ್ವಜನಿಕ ಆಸ್ತಿಯ ವಿಚಾರದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.

ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ನಿಜವಾಗಿಯೂ ಕಾನೂನುಬದ್ಧವಾಗಿ, ಪರಿಸರಕ್ಕೆ ಹಾನಿಯಾಗದಂತೆ ನಿರ್ಮಾಣವಾಗಿದ್ದರೆ ಅದರ ದಾಖಲೆಗಳನ್ನು ಪ್ರಕಟಿಸಿ. ಜನರ ಅನುಮಾನಗಳಿಗೆ ತೆರೆ ಎಳೆಯಿರಿ.

ಆದರೆ ಕೆರೆ ಅಥವಾ ಪರಂಬೊಕು ಭೂಮಿಯಲ್ಲಿ ಅನುಮತಿಯಿಲ್ಲದ ನಿರ್ಮಾಣ, ಮೂಲ ನೀರಿನ ಹರಿವಿಗೆ ಅಡ್ಡಿ ಅಥವಾ ಸಾರ್ವಜನಿಕ ಹಣದ ದುರುಪಯೋಗ ಸಾಬೀತಾದರೆ ಯಾರೇ ಪ್ರಭಾವಶಾಲಿಗಳಾಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು.

ನಮ್ಮ ಹೋರಾಟದ ಮೂರು ಘೋಷಣೆಗಳು: ಕೆರೆ ಯಾರಪ್ಪನ ಆಸ್ತಿಯೂ ಅಲ್ಲ – ಅದು ಸಾರ್ವಜನಿಕರ ಸಂಪತ್ತು!
ಕಾರಂತರ ಹೆಸರು ಗೌರವದ ಸಂಕೇತ – ರಾಜಕೀಯ ರಕ್ಷಣೆಯ ಕವಚವಲ್ಲ! ಅಭಿವೃದ್ಧಿಯ ಹೆಸರಿನಲ್ಲಿ ಖರ್ಚು ಮಾಡಿದರೆ ಲೆಕ್ಕವೂ ಸಾರ್ವಜನಿಕರ ಮುಂದೆ ಇರಲಿ!

ಕೆರೆ ಉಳಿಸಿ – ಕಾರಂತರ ಗೌರವ ಉಳಿಸಿ – ಸಾರ್ವಜನಿಕ ಹಣದ ಲೆಕ್ಕ ಕೊಡಿ! ಎಂದು ಕೋಟ ನಾಗೇಂದ್ರ ಪುತ್ರನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.