Home Crime ಹಿರಿಯಡ್ಕ: ವೃದ್ಧೆಯ ಚಿನ್ನ ಕಳವು : ಆರೋಪಿ ಬಂಧನ : 15 ಗ್ರಾಂ ಚಿನ್ನ ವಶ…!!

ಹಿರಿಯಡ್ಕ: ವೃದ್ಧೆಯ ಚಿನ್ನ ಕಳವು : ಆರೋಪಿ ಬಂಧನ : 15 ಗ್ರಾಂ ಚಿನ್ನ ವಶ…!!

ಹಿರಿಯಡ್ಕ: ಇನ್ಸೂರೆನ್ಸ್ ಅಧಿಕಾರಿ ಬರುತ್ತಾರೆ ಎಂದು ನಂಬಿಸಿ ಮನೆಗೆ ಬಂದು ವೃದ್ಧೆಯ ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿ, 15 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ದೂರುದಾರ ಶಂಕರ ಕುಲಾಲ್ (53) ಕುಕ್ಕೆಹಳ್ಳಿ ಗ್ರಾಮದವರು. ಅವರ ತಾಯಿ ಬಾಬಿ ಹಾಂಡ್ತಿ (75) ಬಡಪಾಲು ಮನೆಯಲ್ಲಿ ವಾಸವಿದ್ದಾರೆ. ಸೆ.13 ರಂದು ಬೆಳಿಗ್ಗೆ 10:30ಕ್ಕೆ 40-45 ವರ್ಷದ ವ್ಯಕ್ತಿಯೊಬ್ಬ ಮನೆಗೆ ಬಂದು “ನಿಮ್ಮ ಮಗ ದಿನೇಶ್ ಮೃತಪಟ್ಟ ಬಗ್ಗೆ ತಿಳಿದಿದೆ, ನಾಳೆ ಇನ್ಸೂರೆನ್ಸ್ ಅಧಿಕಾರಿಗಳು ಬರುತ್ತಾರೆ, ನಾನು ಹೆಚ್ಚಿನ ಹಣ ಬಿಡುಗಡೆ ಮಾಡಿಸುತ್ತೇನೆ” ಎಂದು ಹೇಳಿ 15 ನಿಮಿಷ ಇದ್ದು ಹೋಗಿದ್ದ.

ಮಧ್ಯಾಹ್ನ ಬಾಬಿ ಹಾಂಡ್ತಿ ಕುತ್ತಿಗೆಯಲ್ಲಿದ್ದ ಸುಮಾರು 2 ಪವನಿನ ಚಿನ್ನದ ಸರವನ್ನು ಮನೆಯ ಟೇಬಲ್ ಮೇಲೆ ಇಟ್ಟಿದ್ದರು. ಮಧ್ಯಾಹ್ನ 1:30ಕ್ಕೆ ಅದೇ ವ್ಯಕ್ತಿ ಪುನಃ ಬಂದು ಭಾವನಾತ್ಮಕವಾಗಿ ಮಾತನಾಡಿ ಸಮಾಧಾನ ಪಡಿಸಿದ್ದ. ಬಾಗಿಲು ತೆರೆದಿದ್ದಾಗ ಬಾಬಿ ಹಾಂಡ್ತಿ ಆತನನ್ನು ಜಗಲಿಯಲ್ಲಿ ಕೂರಲು ಹೇಳಿ ತೋಟಕ್ಕೆ ಹೋಗಿ ದನವನ್ನು ಕೊಟ್ಟಿಗೆಗೆ ಕಟ್ಟಿ ಬಂದಾಗ ಆತ ಕಾಣೆಯಾಗಿದ್ದ. ನಂತರ ಟೇಬಲ್ ಮೇಲಿದ್ದ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುಮಾರು 50-60 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ವಿಧಾನದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಬಂಧಿತ ಆರೋಪಿ ಉಮೇಶ್ ಶೆಟ್ಟಿ (45), ತಂದೆ ವಿಶ್ವನಾಥ ಶೆಟ್ಟಿ, ವಾಸ ಮಹೇಂದ್ರ ಶೆಟ್ಟಿ ಬಾಡಿಗೆ ಮನೆ, ಸುಬ್ರಮಣ್ಯ ಸರಕಾರಿ ಪ್ರಾಥಮಿಕ ಶಾಲೆ ಬಳಿ, ಸುಬ್ರಮಣ್ಯ ನಗರ, ಪುತ್ತೂರು ಗ್ರಾಮ, ಉಡುಪಿ ಜಿಲ್ಲೆ. ಈತ ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಅ.23 ರಂದು ಸುಬ್ರಮಣ್ಯ ನಗರದ ಮನೆ ಬಳಿ ವಶಕ್ಕೆ ಪಡೆದು 1.85 ಲಕ್ಷ ರೂ. ಮೌಲ್ಯದ 15 ಗ್ರಾಂ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಪಿಎಸ್ಐ ಪುನೀತ್ ಕುಮಾರ್ ಬಿ.ಇ., ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪೂಜಾರಿ, ಮಹಾಂತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.