Home Karnataka News ಪ್ರಸ್ತುತ ಕ್ರಿಮಿನಲ್ ಪ್ರಕರಣ ಸ್ಥಿತಿ ಪರಿಶೀಲಿಸದೆ ರೌಡಿ ಶೀಟ್ ಬೇಡ– ಹೈಕೋರ್ಟ್..!!

ಪ್ರಸ್ತುತ ಕ್ರಿಮಿನಲ್ ಪ್ರಕರಣ ಸ್ಥಿತಿ ಪರಿಶೀಲಿಸದೆ ರೌಡಿ ಶೀಟ್ ಬೇಡ– ಹೈಕೋರ್ಟ್..!!

ಬೆಂಗಳೂರು: ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸದೆ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.

ಈ ಸಂಬಂಧದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಸಮಗ್ರ ಡಿಜಿಟಲ್ ಡೇಟಾಬೇಸ್ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

ಸಿಸಿಟಿಎನ್‌ಎಸ್ (CCTNS), ಐಸಿಜೆಎಸ್ (ICJS), ಇ-ಕೋರ್ಟ್ಸ್ ದತ್ತಾಂಶ ಹಾಗೂ ಲಭ್ಯವಿರುವ ಇತರ ಸರ್ಕಾರಿ ದತ್ತಾಂಶಗಳನ್ನು ಸಂಯೋಜಿಸಿ ಸಮಗ್ರ ಡಿಜಿಟಲ್ ವ್ಯವಸ್ಥೆ ರೂಪಿಸುವ ಬಗ್ಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಈ ವ್ಯವಸ್ಥೆಯಲ್ಲಿ ಪ್ರಕರಣಗಳ ದಾಖಲು, ದೋಷಾರೋಪ ಪಟ್ಟಿ ಸಲ್ಲಿಕೆ, ವಿಚಾರಣೆಯ ಪ್ರಸ್ತುತ ಸ್ಥಿತಿ, ಖುಲಾಸೆ, ಅಪರಾಧ ಸಾಬೀತು, ಆರೋಪ ಮುಕ್ತಿ, ಪ್ರಕರಣ ರದ್ದು, ಮೇಲ್ಮನವಿ, ಮರುಪರಿಶೀಲನೆ ಹಾಗೂ ತನಿಖೆ ಮುಕ್ತಾಯಗೊಂಡಿರುವ ವಿವರಗಳು ಲಭ್ಯವಾಗುವಂತಿರಬೇಕು ಎಂದು ನ್ಯಾಯಾಲಯ ತಿಳಿಸಿದೆ.

ರೌಡಿ ಶೀಟ್ ತೆರೆಯಲು ಅಥವಾ ಅದನ್ನು ಮುಂದುವರಿಸಲು ಕಾನೂನುಬದ್ಧ ಆಧಾರವಿದೆಯೇ ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರವು ಲಭ್ಯವಿರುವ ಹಾಗೂ ಪ್ರಸ್ತುತ ಮಾಹಿತಿಯ ಆಧಾರದಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ರೌಡಿ ಶೀಟ್ ಎಂಬುದು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ನಿಗಾ ಇರಿಸಲು ಬಳಸುವ ಆಡಳಿತಾತ್ಮಕ ಕ್ರಮವಾಗಿದೆ. ಆದರೆ, ಇಂತಹ ಕ್ರಮವು ವ್ಯಕ್ತಿಯ ಗೌರವ, ಘನತೆ, ಸ್ವಾತಂತ್ರ್ಯ, ಉದ್ಯೋಗ, ವ್ಯವಹಾರ ಹಾಗೂ ಸಾಮಾಜಿಕ ಸ್ಥಾನಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ರೌಡಿ ಶೀಟ್ ತೆರೆಯುವ ಅಥವಾ ಮುಂದುವರಿಸುವ ನಿರ್ಧಾರವನ್ನು ವಾಡಿಕೆಯಂತೆ ಅಥವಾ ಯಾಂತ್ರಿಕವಾಗಿ ಕೈಗೊಳ್ಳಬಾರದು. ಸಂಬಂಧಪಟ್ಟ ವ್ಯಕ್ತಿಯ ವಿರುದ್ಧದ ಪ್ರಕರಣಗಳ ವಾಸ್ತವಿಕ ಸ್ಥಿತಿ ಮತ್ತು ಕಾನೂನುಬದ್ಧ ಆಧಾರಗಳನ್ನು ಪರಿಶೀಲಿಸಿದ ಬಳಿಕವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.