ಮೂಡುಬೆಳ್ಳೆ: ಲೋಕೋಪಯೋಗಿ ಇಲಾಖೆಯ ಉಡುಪಿ-ಕಾರ್ಕಳ-ಮೂಡುಬೆಳ್ಳೆ ರಾಜ್ಯ ಹೆದ್ದಾರಿ (SH-37) ಮಾರ್ಜಿನ್ನಲ್ಲಿಯೇ, ಕೆಲವೆಡೆ ಮುಖ್ಯ ವಿದ್ಯುತ್ ತಂತಿಯ ಕೆಳಗೆ, ಚರಂಡಿ ಮೇಲೆಯೇ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟಿದ್ದು ವ್ಯರ್ಥ ಪರಿಸರ ಪ್ರೇಮ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಟ್ಟ ಗಿಡಗಳು ಈಗಾಗಲೇ ಹುಲ್ಲು ಪೊದೆಗಳ ನಡುವೆ ಸಿಲುಕಿ ಸಾವಿನಂಚಿಗೆ ತಲುಪಿವೆ. ಒಂದು ವೇಳೆ ಬದುಕುಳಿದರೂ ಹುಲ್ಲು ಕಟಾವು ಅಥವಾ ಚರಂಡಿ ದುರಸ್ತಿ ವೇಳೆ ನಾಶವಾಗಲಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ ಎಂದು ಆರೋಪಿಸಲಾಗಿದೆ.
ಅನುಮತಿಯೇ ಇಲ್ಲ:
ಅರಣ್ಯ ಇಲಾಖೆಯು ಹೆದ್ದಾರಿ ಬದಿಯಲ್ಲಿ ಗಿಡ ನೆಡಲು ಲೋಕೋಪಯೋಗಿ ಇಲಾಖೆ ಮತ್ತು ಬೆಳ್ಳೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆದಿಲ್ಲ. ಈ ಬಗ್ಗೆ ಗ್ರಾಮಸಭೆಯಲ್ಲೂ ಚರ್ಚೆಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿಲ್ಲ, ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದೂರು ಸಲ್ಲಿಕೆ:
ವಿದ್ಯುತ್ ತಂತಿ ಕೆಳಗೆ ಬೆಳೆದರೂ ಮೆಸ್ಕಾಂನವರು ಕಡಿಯುತ್ತಾರೆ. ಒಟ್ಟಿನಲ್ಲಿ ಯೋಜನೆಗೆ ಸರಕಾರದ ಹಣ ಸದ್ಬಳಕೆಯಾಗಿಲ್ಲ ಎಂದು ಮೂಡುಬೆಳ್ಳೆ ನಾಗರಿಕ ಸಮಿತಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದೆ.
ಗ್ರಾ.ಪಂ ನಿಂದ ಸ್ಪಂದನೆ ಇಲ್ಲ:
“ಈ ಬಗ್ಗೆ ತಾ.ಪಂ ಇಒ ಮತ್ತು ಗ್ರಾ.ಪಂ ಪಿಡಿಒಗೆ ಪತ್ರ ಬರೆದಿದ್ದೇವೆ. ಗ್ರಾಮಸಭೆಯಲ್ಲೂ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಗ್ರಾ.ಪಂ ನಿಂದ ಯಾವುದೇ ಸ್ಪಂದನೆ ಬಂದಿಲ್ಲ” ಎಂದು ದೂರುದಾರ ರಾಜೇಂದ್ರ ಶೆಟ್ಟಿ ತಿಳಿಸಿದ್ದಾರೆ.




