Home Crime ಉಪ್ಪಿನಂಗಡಿ: ಹಣಕ್ಕಾಗಿ ಬೈಕ್ ಅಡ್ಡಗಟ್ಟಿ ಯುವಕನಿಗೆ ಚೂರಿ ತೋರಿಸಿ ಬೆದರಿಕೆ : ಮೊಬೈಲ್, ನಗದು ದರೋಡೆ…!!

ಉಪ್ಪಿನಂಗಡಿ: ಹಣಕ್ಕಾಗಿ ಬೈಕ್ ಅಡ್ಡಗಟ್ಟಿ ಯುವಕನಿಗೆ ಚೂರಿ ತೋರಿಸಿ ಬೆದರಿಕೆ : ಮೊಬೈಲ್, ನಗದು ದರೋಡೆ…!!

ಉಪ್ಪಿನಂಗಡಿ, ಅ.17: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕಾರಿನಲ್ಲಿ ಬಂದು ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ಯುವಕನಿಂದ ಮೊಬೈಲ್, ನಗದು ದರೋಡೆ ಮಾಡಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೂರುದಾರ ಮಿಥಿಲೇಶ್ (18), ಸಿ.ಆರ್.ಸಿ ಕಾಲೋನಿ, ಕೊಣಾಜೆ ಗ್ರಾಮ, ಕಡಬ ತಾಲೂಕು. ಹಾಲಿ ಮಾವಿನಕಟ್ಟೆ, ಬಳಂಜ ಗ್ರಾಮ. ಇವರು ಅ.16 ರಂದು ಬೆಳಿಗ್ಗೆ 11:45ಕ್ಕೆ ಅತ್ತೆ ಮಗಳೊಂದಿಗೆ ರೇಷನ್ ಕಾರ್ಡ್ ಕೆವೈಸಿಗೆ ಹೆಬ್ಬೆಟ್ಟು ನೀಡಲು ಬಳಂಜದಿಂದ ಕೊಣಾಜೆಗೆ ತಮ್ಮ ಬೈಕ್ KA-21-EA-9184 ನಲ್ಲಿ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಬರುತ್ತಿದ್ದರು.

ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿ ತಲುಪಿದಾಗ ಕಾರು KA-20-MA-6800 ನಲ್ಲಿ ಬಂದ ಆರೋಪಿಗಳು ಬೈಕನ್ನು ಅಕ್ರಮವಾಗಿ ತಡೆದು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದ 1ನೇ ಆರೋಪಿ ತನ್ವೀಶ್ ಮತ್ತು ಇತರ ಇಬ್ಬರು “ನನ್ನ ಹಣ ಎಲ್ಲಿ, ಯಾಕೆ ಹಣ ಕೊಟ್ಟಿಲ್ಲ” ಎಂದು ಜೋರು ಮಾಡಿ ಬೆದರಿಸಿದ್ದಾರೆ. ಮತ್ತೊಬ್ಬ ಆರೋಪಿ ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.

ಬಳಿಕ ಮಿಥಿಲೇಶ್ ಅವರ ಪ್ಯಾಂಟಿನ ಕಿಸೆಯಲ್ಲಿದ್ದ ಸುಮಾರು 3,000 ರೂ ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ (ಜಿಯೋ ಸಿಮ್ 8762234893) ಮತ್ತು ಅಂಗಿ ಕಿಸೆಯಲ್ಲಿದ್ದ 5,200 ರೂ ನಗದನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ಅತ್ತೆಯ ಕೈಯಲ್ಲಿದ್ದ ಸುಮಾರು 2,000 ರೂ ಮೌಲ್ಯದ ಪೋಕೋ ಮೊಬೈಲ್ (ಜಿಯೋ ಸಿಮ್ 9380830588) ಅನ್ನು ಕೂಡ ಬಲವಂತವಾಗಿ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 134/2026, ಕಲಂ 126(2), 308(5) ಜೊತೆಗೆ 3(5) BNS-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.