ಬ್ರಹ್ಮಾವರ, ಅ.17: ನಕಲಿ ಆಸ್ತಿ ದಾಖಲೆ ಸೃಷ್ಟಿಸಿ ಸಹಕಾರಿ ಸೊಸೈಟಿಯಿಂದ ಒಂದು ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ದಂಪತಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ SGR Credit Co-operative Society Ltd. ನೀಡಿದ ದೂರಿನಂತೆ, ಆರೋಪಿಗಳಾದ ಯು. ಅಭಿಷೇಕ್ ಮತ್ತು ರಮಾ ಜೆ. ರಾವ್ ಅವರು ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಮತ್ತು ಅಡಮಾನ ದಾಖಲೆಗಳನ್ನು ಸಲ್ಲಿಸಿ ರೂ. 1.60 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.
ಸೆ.17, 2026 ರಂದು ಸದರಿ ದಾಖಲೆಗಳು ಬ್ರಹ್ಮಾವರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದ್ದು, ಅದನ್ನು ಮೂಲ ದಾಖಲೆ ಎಂದು ನಂಬಿ ಸೊಸೈಟಿಯು ಒಟ್ಟು ರೂ. 1,00,00,500 (ಒಂದು ಕೋಟಿ ಐದು ನೂರು) ಮೊತ್ತವನ್ನು ಆರೋಪಿತರಿಗೆ ಬಿಡುಗಡೆ ಮಾಡಿದೆ.
ನಂತರ, ಸದರಿ ಆಸ್ತಿಗೆ ಸಂಬಂಧಿಸಿದ ಮೊಹಮ್ಮದ್ ಶಾಕೀರ್ ಅವರು ದಾಖಲೆಗಳ ಸತ್ಯಾಸತ್ಯತೆ ಹಾಗೂ ತಮ್ಮ ಸಹಿ ಮತ್ತು ಇತರೆ ದಾಖಲೆಗಳ ದುರುಪಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 196/2026, ಕಲಂ 316(2), 318(4), 336(3), 338, 340(2) RW 3(5) BNS ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.



