ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂಸ್ಟೇಗೆ ನಿರಾಕ್ಷೇಪಣಾ (ಎನ್ ಒಸಿ) ಪತ್ರ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಕಚೇರಿಯ ವಿಎ ಹರೀಶ್ ಎಸ್. ಎಂಬುವರನ್ನು ಗುರುವಾರ ಸಂಜೆ ಕಚೇರಿಯಲ್ಲಿದ್ದಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹೋಂ ಸ್ಟೇಗೆ ಎನ್ ಒಸಿ ನೀಡಲು 5 ಸಾವಿರ ರೂ. ಲಂಚವನ್ನು ಕೇಳಿದ್ದು, ಅದನ್ನು ಗೂಗಲ್ ಪೇ ಮೂಲಕ ಹಾಕುವಂತೆ ತಿಳಿಸಿದ್ದರು. ಅದರಂತೆ ಇವರು ಕಳುಹಿಸಿದ್ದಾರೆ. ಆ ದಾಖಲೆಯೊಂದಿಗೆ ಹಣ ಹಾಕಲು ಹೇಳಿದ ಮೊಬೈಲ್ ಕರೆಯ ವಾಯ್ಸ್ ರೆಕಾರ್ಡ್ ಮೂಲಕ ಖಚಿತಪಡಿಸಿಕೊಂಡು ಲೋಕಾಯುಕ್ತ ಪೊಲೀಸರು ಆರೋಪಿಯ ಬಂಧನ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನ, ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಾಜೇಂದ್ರ ನಾಯ್ಕ ನೇತೃತ್ವದಲ್ಲಿ ಸಿಬಂದಿಯಾದ ರಾಘವೇಂದ್ರ, ನಾಗರಾಜ್, ಅರುಣ್, ಅಬ್ದುಲ್ ಜಲಲ್, ರವೀಂದ್ರ, ಆದರ್ಶ, ರಾಘವೇಂದ್ರ ಹೊಸ್ಕೋಟೆ ಹಾಗೂ ಸೂರಜ್ ಅವರ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸಿದೆ.
ಸುರೇಶ್ ನಾಯ್ಕ ಅವರು ನೀಡಿದ ದೂರಿನಂತೆ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.



