Home Crime ಕೊಲ್ಲೂರು ದೇವಸ್ಥಾನದ ಬಳಿ ಅವಘಡ : ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್, ವೃದ್ಧ...

ಕೊಲ್ಲೂರು ದೇವಸ್ಥಾನದ ಬಳಿ ಅವಘಡ : ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್, ವೃದ್ಧ ವ್ಯಕ್ತಿಗೆ ಗಂಭೀರ ಗಾಯ…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರುನಲ್ಲಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಭಕ್ತರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಅನಿರೀಕ್ಷಿತ ಆಘಾತ ಎದುರಾಗಿದೆ. ಬಲವಾದ ಗಾಳಿಗೆ ಬೃಹತ್ ಗಾತ್ರದ ಲೈಟ್ ಸೆಟ್ ಉರುಳಿ ಭಕ್ತರ ಮೇಲೆ ಬಿದ್ದ ಪರಿಣಾಮ, ವಯೋ ವೃದ್ಧರೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಮೂವರು ನಿಂತಿದ್ದ ಜಾಗಕ್ಕೆ ಲೈಟ್ ಸೆಟ್ ಬಿದ್ದಿದ್ದು, ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.

ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಬೃಹತ್ ಗಾತ್ರದ ಲೈಟ್ ಸೆಟ್ ಅಳವಡಿಸಲಾಗಿತ್ತು. ಇಂದು ಮಧ್ಯಾಹ್ನ ಏಕಾಏಕಿ ಬಲವಾದ ಗಾಳಿ ಬೀಸಿದ್ದು, ಕಟ್ಟಡದ ಮೇಲಿದ್ದ ಲೈಟ್ ಸೆಟ್ ಕೆಳಗೆ ಉರುಳಿ ಬಿದ್ದಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕಟ್ಟಡದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಲೈಟ್ ಸೆಟ್ ಬಿದ್ದಿದೆ. ಈ ವೇಳೆ ಮೂವರು ಭಕ್ತರಿಗೆ ಗಾಯಗಳಾಗಿದೆ.

ಲೈಟ್ ಸೆಟ್ ಉರುಳಿ ಬಿದ್ದ ತಕ್ಷಣ ಭಕ್ತರು ಅದರ ಅಡಿಯಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಆದರೆ, ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆ ಲೈಟ್ ಬಿದ್ದಿದ್ದು ಗಾಯಗೊಂಡು ಮೇಲೇಳಲು ಸಾಧ್ಯವಾಗದೆ ಒದ್ದಾಡಿದ್ದಾರೆ. ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳ ಮೇಲಿದ್ದ ಲೈಟ್ ಸೆಟ್ ತೆರವುಗೊಳಿಸಿದ್ದಾರೆ. ವೃದ್ಧ ವ್ಯಕ್ತಿಯನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿರುವುದರಿಂದ ಭಕ್ತರ ದಟ್ಟಣೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಲೈಟ್ ಸೆಟ್ ಉರುಳಿ ಬಿದ್ದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಉತ್ಸವದ ವೇಳೆ ಅಳವಡಿಸುವ ತಾತ್ಕಾಲಿಕ ವಿದ್ಯುತ್ ಅಲಂಕಾರಗಳು ಮತ್ತು ಬೃಹತ್ ರಚನೆಗಳ ಸುರಕ್ಷತೆಯ ಕುರಿತು ಪ್ರಶ್ನೆಗಳು ಎದ್ದಿವೆ.