ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರರಾದ ಪತ್ನಿ ಗಾಯಗೊಂಡ ಘಟನೆ ಒತ್ತಿನೆಣೆ ನರ್ಸರಿ ಸಮೀಪ ನಡೆದಿದೆ.
ಮೃತಪಟ್ಟವರು ಮಂಜುನಾಥ ಮೋಗೇರ (42) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಅವರ ಪತ್ನಿ ಪದ್ಮಾವತಿ ಎಂದು ತಿಳಿಯಲಾಗಿದೆ.
ಅಕ್ಟೋಬರ್ 10ರಂದು ಮಧ್ಯಾಹ್ನ 3:50ಕ್ಕೆ KA 47 Y 5031 ಬೈಕ್‌ನಲ್ಲಿ ಮಂಜುನಾಥ್ ಅವರು ಪತ್ನಿಯನ್ನು ಹಿಂಬದಿ ಕೂರಿಸಿಕೊಂಡು ಬೈಂದೂರಿನಿಂದ ಭಟ್ಕಳ ಕಡೆಗೆ ವೇಗವಾಗಿ ಹೋಗುತ್ತಿದ್ದಾಗ ಒತ್ತಿನೆಣೆ ಬಳಿ ನಿಯಂತ್ರಣ ತಪ್ಪಿ ಎಡಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ರಸ್ತೆಗೆ ಬಿದ್ದಿದ್ದು, ಹೆಲ್ಮೆಟ್ ಹಾರಿಹೋಗಿ ಸವಾರನ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಪದ್ಮಾವತಿ ಅವರ ತಲೆ ಮತ್ತು ದೇಹಕ್ಕೆ ಗಾಯಗಳಾಗಿವೆ.
ಇಬ್ಬರನ್ನೂ ತಕ್ಷಣ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಸವಾರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪದ್ಮಾವತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಈ ಬಗ್ಗೆ ಪರಮೇಶ್ವರ ನಾಗಪ್ಪ ಮೊಗೇರ (46), ಶಾಬಾಲಿ ಮನೆ, ಬೆಳಗ್ನಿ, ಭಟ್ಕಳ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026, ಕಲಂ 281, 125(b), 106(1) BNS ರಂತೆ ಪ್ರಕರಣ ದಾಖಲಾಗಿದೆ.



