ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಕರಾವಳಿ ಭಾಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ಯು-ಆ್ಯಕ್ಟ್ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಆಗಸ್ಟ್ 22ರಂದು ಉಡುಪಿಯಲ್ಲಿ ಸಭೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಸ್ಥಾಪಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಕರಾವಳಿಯಿಂದ ಬೆಂಗಳೂರಿನ ಹೈಕೋರ್ಟ್‌ಗೆ ಪ್ರಕರಣಗಳ ವಿಚಾರಣೆಗೆ ತೆರಳಲು 900ರಿಂದ 1,000 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಬೇಕಾಗಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು, ಮಹಿಳೆಯರು ಹಾಗೂ ಕಕ್ಷಿದಾರರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಕರಾವಳಿಯಲ್ಲಿ ಪೀಠ ಸ್ಥಾಪನೆಯಾದರೆ ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯ ದೊರೆಯಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಕೀಲರು, ಪತ್ರಕರ್ತರು, ಸಾಮಾಜಿಕ ಹಾಗೂ ಉದ್ಯಮ ಸಂಘಟನೆಗಳು, ವಿದ್ಯಾರ್ಥಿ ಮತ್ತು ಕಾರ್ಮಿಕ ಸಂಘಟನೆಗಳು, ಮಾಜಿ ಸೈನಿಕರು, ಆಟೋ ಚಾಲಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಹೋರಾಟವನ್ನು ವಕೀಲರಿಗೆ ಸೀಮಿತಗೊಳಿಸದೆ ಇಡೀ ಕರಾವಳಿ ಜನತೆಯ ಧ್ವನಿಯಾಗಿಸುವ ಉದ್ದೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪೌರ್ಣಾಮಿ ಪ್ರೇಮ್, ವಿಜಯ್ ಡಿಸೋಜಾ, ಮಾಧವ ಕಾಮತ್, ಸರಿತಾ ಹಾಗೂ ಸುರೇಶ್ ಕಾಮತ್ ಉಪಸ್ಥಿತರಿದ್ದರು.




