ಮೂಡಬಿದ್ರೆ: ಕಾರ್ಕಳ – ಮಂಗಳೂರು ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೋಟ ರುದ್ರದೇವ್ (30 ವರ್ಷ) ಎಂದು ತಿಳಿದು ಬಂದಿದೆ.
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಬಳಿ ದಿನಾಂಕ 07-10-2026 ರಂದು ಡಿಬಿಎಲ್ ಕಂಪನಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಪಿರ್ಯಾದುದಾರರಾದ ಎದ್ದುಲ ಆಂಜನೇಯಲು, ಅವರ ಪತ್ನಿ ರಾಜಮ್ಮ, ಮಗ ಎದ್ದುಲ ವೆಂಕಟೇಶ್ ಮತ್ತು ಊರಿನವರಾದ ಕೋಟ ರುದ್ರದೇವ್, ಮೋನಿಕಾ ಸೇರಿದಂತೆ ಹಲವರು ಕಾಮಗಾರಿಯಲ್ಲಿ ತೊಡಗಿದ್ದರು.
ಸಂಜೆ ಸುಮಾರು 3.30 ಗಂಟೆಗೆ ಕೋಟ ರುದ್ರದೇವ್ ಅವರು ರಸ್ತೆ ದಾಟುತ್ತಿದ್ದ ವೇಳೆ, ಕೆಎ-42-ಬಿ-1718 ನೊಂದಣಿ ಸಂಖ್ಯೆಯ ಟಿಪ್ಪರ್ ಅನ್ನು ಅದರ ಚಾಲಕ ದಿನೇಶ್ ಅಗ್ನಿಹೋತ್ರಿ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಕೆಳಕ್ಕೆ ಬಿದ್ದ ರುದ್ರದೇವ್ ಅವರ ಸೊಂಟದ ಮೇಲೆ ಟಿಪ್ಪರ್ ನ ಟೈಯರ್ ಹರಿದಿದ್ದು, ಸೊಂಟ ಮತ್ತು ಸೊಂಟದ ಕೆಳಭಾಗಕ್ಕೆ ತೀವ್ರ ಗಾಯಗಳಾಗಿವೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಸಂಜೆ 6.15 ಗಂಟೆಗೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಸಂಬಂಧ ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪಿರ್ಯಾದುದಾರರು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



