Home Latest ಬನ್ನಂಜೆ ಪಾಳುಬಿದ್ದಿರುವ ಗಾಂಧಿ ಭವನ ಅನೈತಿಕ ಚಟುವಟಿಕೆಗಳ ಅಡ್ಡೆ: ರಕ್ಷಣೆಗೆ ಆಗ್ರಹ..!!

ಬನ್ನಂಜೆ ಪಾಳುಬಿದ್ದಿರುವ ಗಾಂಧಿ ಭವನ ಅನೈತಿಕ ಚಟುವಟಿಕೆಗಳ ಅಡ್ಡೆ: ರಕ್ಷಣೆಗೆ ಆಗ್ರಹ..!!

ಉಡುಪಿ : ಬನ್ನಂಜೆಯ ಡಾ. ಜಿ. ಶಂಕರ್ ರಸ್ತೆಯಲ್ಲಿ ಬರುವ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಛೇರಿ ಸನಿಹ ಇರುವ, ಗಾಂಧಿ ಭವನ ಹಲವು ಸಮಯದಿಂದ ಹಾಳುಬಿದ್ದು ದುರ್ನಾತ ಬೀರುತ್ತಿದೆ.

ಕಂಪೌಂಡ್ ಸುತ್ತಲು ಗಿಡಗಂಟಿ, ಹುಲ್ಲುಗಳು ಬೆಳೆದುನಿಂತಿವೆ. ಗೋಡೆಗಳಿಗೆ ಬಳಿದ ಬಣ್ಣ ಮಾಸಿಹೋಗಿ, ಪಾಚಿಬೆಳೆದುಕೊಂಡಿದೆ. ಕಿಟಕಿಯ, ಪ್ರವೇಶ ದ್ವಾರದ ಬಾಗಿಲುಗಳು ತೆರೆದುಕೊಂಡು, ಅನೈತಿಕ ಚಟುವಟಿಕೆಗಳು ನಡೆಯಲು ಮುಕ್ತ ಅವಕಾಶದ ಸ್ಥಳವಾಗಿ ಮಾರ್ಪಟ್ಟಿದೆ. ನೀರಿನ ಟ್ಯಾಂಕಿನ ಮುಚ್ಚಳ ತೆರೆದುಕೊಂಡಿದ್ದು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಕಂಪೌಂಡಿನ ಒಳಾಂಗಣ ಮತ್ತು ಸಭಾಭವನದ ಒಳಾಂಗಣದಲ್ಲಿ ಕಸ ತ್ಯಾಜ್ಯಗಳು ಚದುರಿಕೊಂಡಿವೆ. ಶೌಚಾಲಯದ ಬಾಗಿಲು ಮುರಿದುಬಿದ್ದಿದೆ.

ಯಾವೊಂದು ರಕ್ಷಣೆ ಇಲ್ಲಿ ಇಲ್ಲದಿರುವುದರಿಂದ ಕಿಡಿಗೇಡಿಗಳು ಪೋಕರಿಗಳ ಅಡ್ಡೆಯಾಗಿದೆ. ಜುಗಾರಿ ಆಡುವರು, ಮದ್ಯವ್ಯಸನಿಗಳು ಪಾನಮತ್ತರಾಗಿ ಮಲಗುತ್ತಿರುವುದು ಕಂಡುಬಂದಿದೆ. ಗಾಂಧಿ ಭವನದಲ್ಲಿಯೇ ಗಾಂಧೀಜಿಯ ತತ್ವ ಸಿದ್ಧಾಂತಗಳಿಗೆ ಚ್ಯುತಿ ಬರುತ್ತಿರುವುದು ವಿಪರ್ಯಾಸದ ಸಂಗತಿ ಎನಿಸಿಕೊಂಡಿದೆ.

ನಗರದ ಹೃದಯ ಭಾಗದಲ್ಲಿರುವ ನಗರಸಭೆಯ ಆಸ್ತಿಯಾಗಿರುವ ಈ ಗಾಂಧಿ ಭವನವನ್ನು ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ ತಿದ್ದುಪಡಿ, ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಗಳು, ಪೋಲಿಯೋ ಲಸಿಕೆ ಮೊದಲಾದ ಸಾರ್ವಜನಿಕ ಸೇವಾ ಚಟುವಟಿಕೆಗಳು ನಡೆಯಲು ಉಪಯೋಗಿಸಲಾಗುತಿತ್ತು. ಅಮೂಲ್ಯವಾದ ಸಾರ್ವಜನಿಕ ಆಸ್ತಿ ಹಾಳುಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ನಗರಾಡಳಿತ ಅಧಿಕಾರಿಗಳು ಗಾಂಧಿ ಭವನದಲ್ಲಿ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಗಾಂಧಿ ಭವನವನ್ನು ದುರಸ್ತಿಪಡಿಸಿ ಸಾಮಾಜಿಕ ಚಟುವಟಿಕೆಗಳಿಗೆ ಬಳಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಪ್ರೇಮಾನಂದ ಕಲ್ಮಾಡಿ ಆಗ್ರಹಪಡಿಸಿದ್ದಾರೆ.