ಅ.10ರಂದು ಬಾಳಿಗಾ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮ : ಡಾ. ಪಿ.ವಿ. ಭಂಡಾರಿ…
ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅ.10ರಂದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಹೇಳಿದರು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಲಿಸಲ್ಪಟ್ಟ ಜೀವನದ ಅನುಭವಗಳು: ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಆಶಯದೊಂದಿಗೆ ಈ ಬಾರಿಯ ದಿನಾಚರಣೆ ನಡೆಯಲಿದೆ. ಇಂದಿನ ಒತ್ತಡದ ಜೀವನಶೈಲಿಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. 10ರಿಂದ 19 ವರ್ಷ ವಯಸ್ಸಿನವರಲ್ಲಿ ಏಳು ಮಂದಿಯಲ್ಲಿ ಒಬ್ಬರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, 60 ವರ್ಷ ಮೇಲ್ಪಟ್ಟವರಲ್ಲಿಯೂ ಸಮಸ್ಯೆಗಳು ಕಂಡುಬರುತ್ತಿವೆ. ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ಎಂದು ತಿಳಿಸಿದರು.
ಸಿನಿಮಾ ತಾರೆಯರು ಹಾಗೂ ಕ್ರೀಡಾಪಟುಗಳು ತಮ್ಮ ಮಾನಸಿಕ ಆರೋಗ್ಯದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುವುದು ಈ ಕುರಿತ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಮುಕ್ತ ಚರ್ಚೆಗಳು ಮಾನಸಿಕ ಅನಾರೋಗ್ಯದ ಕುರಿತ ಕಳಂಕ ಹಾಗೂ ತಾರತಮ್ಯ ಕಡಿಮೆ ಮಾಡಲು ನೆರವಾಗುತ್ತವೆ ಎಂದರು.
ಕರ್ನಾಟಕ ಸರ್ಕಾರದ ‘ಮಾನಸಧಾರ’ ಯೋಜನೆಯಡಿ ಆಸ್ಪತ್ರೆಯ ‘ಬಂಧು’ ಡೇ-ಕೇರ್ ಸೆಂಟರ್‌ಗೆ ಆಗಮಿಸುವ ಚೇತರಿಕೆಯ ಹಂತದಲ್ಲಿರುವವರಿಗೆ ಜೀವನ ಕೌಶಲ್ಯ ಬೆಳೆಸಲು ಅಗತ್ಯ ಸೌಲಭ್ಯ ಹಾಗೂ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುತ್ತಿದೆ ಎಂದು ಹೇಳಿದರು.
‘ಅಭಯ’, ‘ಪರಿವರ್ತನ’, ‘ಬಂಧು’ ಡೇ-ಕೇರ್ ಸೆಂಟರ್ ಹಾಗೂ ‘ಹೊಂಬೆಳಕು’ ನಿವಾಸಿಗಳಿಗಾಗಿ ಆಟೋಟ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅವರು ರಚಿಸಿದ ಚಿತ್ರಕಲೆ ಹಾಗೂ ಸೃಜನಾತ್ಮಕ ಕರಕುಶಲ ವಸ್ತುಗಳ ಪ್ರದರ್ಶನ ಅ.10ರಂದು ಉದ್ಘಾಟನೆಯಾಗಲಿದೆ. ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಉತ್ತಮ ಜೀವನ ನಡೆಸುತ್ತಿರುವವರು ಹಾಗೂ ಅವರ ಆರೈಕೆದಾರರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಲಿದ್ದು, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಜಾಗತಿಕ ಅಭಿಯಾನಗಳ (ಮಾನಸಿಕ ಆರೋಗ್ಯ) ಮುಖ್ಯ ಸಂಯೋಜಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಹೆರಾಲ್ಡ್ ಸೋನ್ಸ್ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಹೆಚ್. ಗಣೇಶ್ ಪೈ ಭಾಗವಹಿಸಲಿದ್ದಾರೆ. ಡಾ. ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲೆ 317Cಯ ನೂತನ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ಹೆಚ್. ಗಣೇಶ್ ಪೈ, ಡಾ. ಶಕೀಲಾ ಹಾಗೂ ಡಾ. ರವಿರಾಜ್ ನಾಯಕ್ ಉಪಸ್ಥಿತರಿದ್ದರು.






