Home Crime ಮಲ್ಪೆ: ಗೂಡಂಗಡಿಯಲ್ಲಿ ವೃದ್ಧನನ್ನು ಒತ್ತಿಹಿಡಿದು ಚಿನ್ನದ ಸರ ದೋಚಿ ಪರಾರಿ…!!

ಮಲ್ಪೆ: ಗೂಡಂಗಡಿಯಲ್ಲಿ ವೃದ್ಧನನ್ನು ಒತ್ತಿಹಿಡಿದು ಚಿನ್ನದ ಸರ ದೋಚಿ ಪರಾರಿ…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡವಿನ ಬಾಗಿಲು ಬಳಿ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ 76 ವರ್ಷದ ವೃದ್ಧನಿಂದ ಚಿನ್ನದ ಸರ ದೋಚಿದ ಘಟನೆ ನಡೆದಿದೆ.

ಕೊಡವೂರು ಗ್ರಾಮದ ವಿಠಲ ಸುವರ್ಣ (76) ಅವರು ಕಡವಿನ ಬಾಗಿಲು ವಿಠೋಭ ರುಖುಮಾಯಿ ಭಜನಾ ಮಂದಿರದ ಬಳಿ ಸುಮಾರು 50 ವರ್ಷಗಳಿಂದ ಗೂಡಂಗಡಿ ನಡೆಸುತ್ತಿದ್ದಾರೆ.

ಅಕ್ಟೋಬರ್ 4ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತರು ಮೋಟಾರ್ ಸೈಕಲ್‌ನಲ್ಲಿ ಬಂದು ಅಂಗಡಿಯ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿದ್ದಾರೆ. ಬಳಿಕ ಹಿಂಬದಿ ಕುಳಿತಿದ್ದ ವ್ಯಕ್ತಿ ಅಂಗಡಿಗೆ ಬಂದು ₹20 ನೀಡಿ ವಿಮಲ್ ಕೇಳಿದ್ದಾನೆ.

ವಿಠಲ ಸುವರ್ಣ ಅವರು ಡಬ್ಬಿಯಿಂದ ವಿಮಲ್ ತೆಗೆಯುತ್ತಿದ್ದ ವೇಳೆ ಆರೋಪಿ ಅವರನ್ನು ಬಲವಂತವಾಗಿ ಒತ್ತಿಹಿಡಿದು, ಕುತ್ತಿಗೆಯಲ್ಲಿದ್ದ ಸುಮಾರು 1.5 ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೊರಗೆ ಓಡಿ, ಸಹಚರನೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.