ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಸುಜೀರು ಕಾನ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 3ರಂದು ಮುಂಜಾನೆ 3.15ರ ಸುಮಾರಿಗೆ ಫರಂಗಿಪೇಟೆ ಜಂಕ್ಷನ್ ಬಳಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಸುಜೀರ್ ಮಲ್ಲಿ ಕಡೆಯಿಂದ ಮಾರಿಪಳ್ಳ ಕಡೆಗೆ ಪಿಕಪ್ ವಾಹನದಲ್ಲಿ ಮರಳು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.
ಮಾಹಿತಿಯ ಆಧಾರದ ಮೇಲೆ ಪೊಲೀಸರು ಸುಜೀರು ಕಾನ ಬಳಿ ತೆರಳಿದ್ದು, ಮುಂಜಾನೆ 3.25ರ ಸುಮಾರಿಗೆ ಮರಳು ತುಂಬಿಕೊಂಡು ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ವಾಹನದಿಂದ ಜಿಗಿದು ಪರಾರಿಯಾಗಿದ್ದಾನೆ.
ಪೊಲೀಸರು ಪರಿಶೀಲನೆ ನಡೆಸಿದಾಗ KA-19-AB-0608 ನೋಂದಣಿ ಸಂಖ್ಯೆಯ ಮಹೀಂದ್ರ ಪಿಕಪ್ ವಾಹನದಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ. ಸುಮಾರು ₹3,000 ಮೌಲ್ಯದ ಮರಳು ಹಾಗೂ ₹3 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನ ಪತ್ತೆಗೆ ತನಿಖೆ ಮುಂದುವರಿದಿದೆ.



