ಬಂಟ್ವಾಳ: ಯಾವುದೇ ಪರವಾನಿಗೆ ಇಲ್ಲದೆ ಸುಮಾರು 10 ಟನ್ ಅನ್ಸೈಜ್ ಕಪ್ಪುಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಬಂಟ್ವಾಳ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೆ.30ರಂದು ಬಾಳ್ತಿಲ ಗ್ರಾಮದ ನೀರಪಾದೆ ಕಡೆಯಿಂದ ಕಪ್ಪುಕಲ್ಲು ತುಂಬಿದ ಟಿಪ್ಪರ್ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಚಂಡೆ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನೀರಪಾದೆ ಕಡೆಯಿಂದ ದಾಸರಕೋಡಿ ಕಡೆಗೆ ಬರುತ್ತಿದ್ದ ಕೆಎಲ್-14-ಯು-9567 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಸುಮಾರು 10 ಟನ್ ಅನ್ಸೈಜ್ ಕಪ್ಪುಕಲ್ಲು ಪತ್ತೆಯಾಗಿದೆ.
ವಿಚಾರಣೆ ವೇಳೆ ಚಾಲಕ ಸೆಬಾಸ್ಟಿನ್ ಜೇಕಬ್ ಯಾವುದೇ ಪರವಾನಿಗೆ ಇಲ್ಲದೆ ಕಾಸರಗೋಡಿಗೆ ಕಲ್ಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ಅಂದಾಜು ₹8 ಲಕ್ಷ ಮೌಲ್ಯದ ಟಿಪ್ಪರ್ ಲಾರಿ ಹಾಗೂ ಸುಮಾರು ₹6 ಸಾವಿರ ಮೌಲ್ಯದ ಕಪ್ಪುಕಲ್ಲನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



