ಕುಂದಾಪುರ: ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದುದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ, ಕೈಯಿಂದ ಹೊಡೆದು ಕಾಲಿನಿಂದ ತುಳಿದು ಗಾಯಗೊಳಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ರಾತ್ರಿ ಬಗ್ವಾಡಿ ಕ್ರಾಸ್‌ನ ಎನ್.ಟಿ.ಎಸ್ ಪ್ಯಾಲೆಸ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ದೇವಲ್ಕುಂದ ಗ್ರಾಮದ ದಿನೇಶ್ ಲೂವಿಸ್ (36) ಅವರು ಊಟಕ್ಕೆ ಕುಳಿತಿದ್ದ ವೇಳೆ ಪಕ್ಕದ ಟೇಬಲ್‌ನಲ್ಲಿ ಪರಿಚಯದವರಾದ ಸಚಿನ್, ರಜತ್, ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಊಟ ಮಾಡುತ್ತಿದ್ದರು. ಅವರು ಜೋರಾಗಿ ಮಾತನಾಡುತ್ತಿದ್ದುದನ್ನು ರಾತ್ರಿ 8.45ರ ಸುಮಾರಿಗೆ ದಿನೇಶ್ ಪ್ರಶ್ನಿಸಿ ನಿಧಾನವಾಗಿ ಮಾತನಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ರಜತ್ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿದ್ದು, ಸಚಿನ್ ಸೋಡಾ ಬಾಟಲಿಯಿಂದ ದಿನೇಶ್ ಅವರ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಟಲಿ ಒಡೆದ ಪರಿಣಾಮ ತಲೆ ಹಾಗೂ ಎಡ ಕೆನ್ನೆಗೆ ಗಾಯವಾಗಿ ರಕ್ತಸ್ರಾವವಾಗಿದೆ ಎನ್ನಲಾಗಿದೆ. ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಕೂಡ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ಬಾರ್‌ನ ಕೌಂಟರ್‌ನಲ್ಲಿದ್ದವರು ಹಾಗೂ ಅಕ್ಕಪಕ್ಕದವರು ಮಧ್ಯಪ್ರವೇಶಿಸಿ ಹಲ್ಲೆ ತಡೆದಿದ್ದು, ಬಳಿಕ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ದಿನೇಶ್ ಅವರನ್ನು ಸಾರ್ವಜನಿಕರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2026ರಂತೆ BNS ಕಲಂ 115(2), 118(1), 352, 351(2) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



