ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಹೆತ್ತ ತಾಯಿಯನ್ನು ಮಗನೇ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ಸಂಭವಿಸಿದೆ.
ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದ್ದಾರೆ. ಬಳಿಕ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ವಿಷಯವನ್ನು ತಂದಿದ್ದಾರೆ.
ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ದಾಖಲು ಪ್ರಕ್ರಿಯೆ ವೇಳೆ ವೃದ್ಧೆ ತನ್ನ ಹೆಸರು ಸರಸ್ವತಿ (70) ಎಂದು ಹಾಗೂ ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದಾರೆ. ತನ್ನ ಮಗ ಕಾರಿನಲ್ಲಿ ಕರೆತಂದು, ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.






