ಮಂಗಳೂರು: ಹಿಂದುತ್ವ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯೇ ನೀಡಿದ ದೂರಿನ ಆಧಾರದ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಇದೀಗ ಸಿಸಿಬಿಗೆ ವಹಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಿತ್ತೊಟ್ಟು-ಕಾಶಿಪಟ್ಣ ನಿವಾಸಿ ಅಭಿಷೇಕ್ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಉಡುಪಿಯ ಸುದೀಪ್ ಎಂಬಾತನೊಂದಿಗೆ ಸುಮಾರು ಒಂದೂವರೆ ವರ್ಷಗಳಿಂದ ಪರಿಚಯವಿದ್ದು, ಇಬ್ಬರೂ ಆತ್ಮೀಯರಾಗಿದ್ದೆವು. 2025ರ ಮೇ ತಿಂಗಳಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಸುದೀಪ್ ಪದೇಪದೇ ಪ್ರತೀಕಾರದ ಬಗ್ಗೆ ಮಾತನಾಡುತ್ತಿದ್ದ. ಒಬ್ಬ ಹಿಂದುವಿನ ಹತ್ಯೆಗೆ ಪ್ರತಿಯಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಬೇಕು ಎಂದು ಹೇಳುತ್ತಿದ್ದ ಎಂದು ಅಭಿಷೇಕ್ ದೂರಿನಲ್ಲಿ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸಭೆ: ಕೊಲೆ ಸಂಚಿಗೆ ಪ್ರಚೋದನೆ ಆರೋಪ: ಸುಮಾರು ನಾಲ್ಕು ತಿಂಗಳ ಹಿಂದೆ ಸುದೀಪ್ ದೂರವಾಣಿ ಮೂಲಕ ಸಂಪರ್ಕಿಸಿ ಉಡುಪಿಗೆ ಬರುವಂತೆ ತಿಳಿಸಿದ್ದ. ಅದರಂತೆ ಅಭಿಷೇಕ್ ತನ್ನ ಸ್ನೇಹಿತ ಕೀರ್ತನ್‌ನೊಂದಿಗೆ ಉಡುಪಿಗೆ ತೆರಳಿದ್ದು, ಬಸ್ ನಿಲ್ದಾಣದ ಬಳಿಯ ಹೋಟೆಲೊಂದರಲ್ಲಿ ಸಭೆ ನಡೆದಿತ್ತು. ಈ ವೇಳೆ ಸುದೀಪ್, ಮಹೇಶ್ ಎಂಬಾತನನ್ನು ಪರಿಚಯಿಸಿ, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸುವಂತೆ ಪ್ರೋತ್ಸಾಹಿಸಿದ್ದಲ್ಲದೆ, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಕಾರ್ಕಳ ಸಮೀಪದ ಚರ್ಚ್‌ವೊಂದರ ಬಳಿ ಸುದೀಪ್‌ನನ್ನು ಕರೆಯಿಸಿಕೊಂಡು ಅಭಿಷೇಕ್, ಕೀರ್ತನ್ ಹಾಗೂ ಸುದೀಪ್ ನಡುವೆ ಮತ್ತೊಮ್ಮೆ ಮಾತುಕತೆ ನಡೆದಿತ್ತು. ಕೊಲೆ ಕೃತ್ಯ ನಡೆಸಿದರೆ ಒಟ್ಟು ₹24 ಲಕ್ಷ ನೀಡುವುದಾಗಿ, ಆರೋಪಿಗಳು ಜೈಲಿಗೆ ಹೋದರೆ ಅವರ ಕುಟುಂಬಗಳಿಗೆ ಪ್ರತಿ ತಿಂಗಳು ₹5,000 ಮೌಲ್ಯದ ದಿನಸಿ ಹಾಗೂ ಮನೆ ಖರ್ಚಿಗೆ ₹15,000 ನೀಡುವುದಾಗಿ ಸುದೀಪ್ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವ್ಯಕ್ತಿಯ ಚಲನವಲನದ ಮೇಲೆ ನಿಗಾ ಆರೋಪ
ಇದಾದ ಬಳಿಕ ಕಿನ್ನಿಪದವಿಯ ವ್ಯಕ್ತಿಯೊಬ್ಬರ ಫೋಟೋವನ್ನು ಸುದೀಪ್ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದನೆಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ. ಆ ವ್ಯಕ್ತಿ ಹಿಂದುತ್ವ ಸಂಘಟನೆಯ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಸುದೀಪ್ ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದರಂತೆ ಅಭಿಷೇಕ್ ಹಾಗೂ ಕೀರ್ತನ್ ಕಾರಿನಲ್ಲಿ ಕಿನ್ನಿಪದವಿಗೆ ತೆರಳಿ ಆ ವ್ಯಕ್ತಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಈ ಕಾರ್ಯಕ್ಕಾಗಿ ಕಾರಿನ ಡೀಸೆಲ್ ಹಾಗೂ ಇತರ ಖರ್ಚಿಗೆ ಸುದೀಪ್ ₹2,000 ಅನ್ನು ಯುಪಿಐ ಮೂಲಕ ಕಳುಹಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಳ್ಯದ ವ್ಯಕ್ತಿಯ ಸಂಪರ್ಕ; ತಲವಾರು ಸಿದ್ಧಪಡಿಸಿದ್ದ ಆರೋಪ:
ಕೊಲೆ ಕೃತ್ಯಕ್ಕಾಗಿ ಅಭಿಷೇಕ್ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಚಿಂತನ್ ಗುಂಡ್ಯ ಎಂಬಾತನನ್ನು ಸಂಪರ್ಕಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಹಣ ನೀಡಿದರೆ ಕೃತ್ಯದಲ್ಲಿ ಭಾಗಿಯಾಗಲು ಸಿದ್ಧನಿರುವುದಾಗಿ ಚಿಂತನ್ ಹೇಳಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ಮನೆಯಲ್ಲಿದ್ದ ಎರಡು ತಲವಾರುಗಳನ್ನು ತೆಗೆದು ಕೃತ್ಯಕ್ಕಾಗಿ ಸಿದ್ಧಪಡಿಸಿಕೊಂಡಿದ್ದೆವು ಎಂದು ಅಭಿಷೇಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿಗೆ ಹೆರಿಗೆ: ಕೃತ್ಯದಿಂದ ಹಿಂದೆ ಸರಿದಿದ್ದಾಗಿ ಹೇಳಿಕೆ: ಸುದೀಪ್ ಪದೇಪದೇ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ ಕೃತ್ಯವನ್ನು ಪೂರ್ಣಗೊಳಿಸುವಂತೆ ಒತ್ತಡ ಹೇರುತ್ತಿದ್ದ ಎಂದು ಅಭಿಷೇಕ್ ಆರೋಪಿಸಿದ್ದಾರೆ. ಈ ನಡುವೆ ತಮ್ಮ ಪತ್ನಿಗೆ ಹೆರಿಗೆಯಾಗಿದ್ದು, ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಭಯದಿಂದ ಕೃತ್ಯದಿಂದ ಹಿಂದೆ ಸರಿದಿದ್ದಾಗಿ ಅವರು ತಿಳಿಸಿದ್ದಾರೆ.
ಸುದೀಪ್ ಹಾಗೂ ಮಹೇಶ್ ಪ್ರಚೋದನೆ ನೀಡಿ ಕೊಲೆ ಸಂಚು ರೂಪಿಸಿದ್ದರು. ತಮ್ಮೊಂದಿಗೆ ಚಿಂತನ್ ಹಾಗೂ ಕೀರ್ತನ್ ಸೇರಿ ಕಿನ್ನಿಪದವಿಗೆ ತೆರಳಿ ವ್ಯಕ್ತಿಯೊಬ್ಬರ ಕುರಿತು ಮಾಹಿತಿ ಸಂಗ್ರಹಿಸಿ, ಕೊಲೆ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದೆವು ಎಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ.
ಸುದೀಪ್ ಸೇರಿದಂತೆ ಇತರರೊಂದಿಗೆ ನಡೆದ ವಾಟ್ಸ್‌ಆ್ಯಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು ಹಾಗೂ ಚಿಂತನ್ ಮತ್ತು ಕೀರ್ತನ್ ಅವರೊಂದಿಗೆ ನಡೆದ ಸಂಭಾಷಣೆಗಳು ತಮ್ಮ ಮೊಬೈಲ್‌ನಲ್ಲಿವೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಸಿಬಿ ಅಧಿಕಾರಿಗಳಿಗೆ ವಹಿಸಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.”
ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ, “ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ತನಿಖೆಯ ಮೂಲಕ ವಾಸ್ತವಾಂಶಗಳನ್ನು ತಿಳಿದುಕೊಂಡು, ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತನಿಖಾಧಿಕಾರಿಗಳ ಜವಾಬ್ದಾರಿಯಾಗಿದೆ. ಕಾನೂನುಬದ್ಧವಾಗಿ ಸ್ವೀಕಾರಾರ್ಹವಾದ ಸಾಕಷ್ಟು ಸಾಕ್ಷ್ಯಗಳು ಲಭ್ಯವಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ”.
ಪ್ರಕರಣದಲ್ಲಿರುವ ಆರೋಪಗಳು ಸದ್ಯ ಎಫ್‌ಐಆರ್ ಹಾಗೂ ದೂರುದಾರರ ಹೇಳಿಕೆಗಳ ಆಧಾರದಲ್ಲಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ದೃಢಪಡಬೇಕಿದೆ.



