Home Crime ಮಂಗಳೂರು: ಕಾಲೇಜು ಯೂನಿಯನ್ ಪದಗ್ರಹಣ ಸಮಾರಂಭದಲ್ಲಿ ಗೋಡೆ ಕುಸಿದು ಭೀಕರ ದುರಂತ : ಓರ್ವ ವಿದ್ಯಾರ್ಥಿ...

ಮಂಗಳೂರು: ಕಾಲೇಜು ಯೂನಿಯನ್ ಪದಗ್ರಹಣ ಸಮಾರಂಭದಲ್ಲಿ ಗೋಡೆ ಕುಸಿದು ಭೀಕರ ದುರಂತ : ಓರ್ವ ವಿದ್ಯಾರ್ಥಿ ಸಾವು…!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಕಟ್ಟಡದ ಮೊದಲ ಮಹಡಿಯ ತಡೆ ಗೋಡೆ ಕುಸಿದು ಬಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಯೆಮ್ಮೆಕೆರೆಯಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಹಳೆಅಂಗಡಿ ನಿವಾಸಿ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದೆ.

ಕಾರ್ಯಕ್ರಮ ನಡೆಯುತ್ತಿದ್ದಾಗ ಶಮಾಜ್ ನೆಲ ಮಹಡಿಯಲ್ಲಿ ನಿಂತಿದ್ದ ವೇಳೆ ಮೇಲಿನಿಂದ ತಡೆ ಗೋಡೆಯ ಒಂದು ಭಾಗ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.

ಗಾಯಗೊಂಡವರನ್ನು ಸುರಿಂಜೆ ನಿವಾಸಿ ಮೊಹಮ್ಮದ್ ಶನಾನ್ (18), ಅಡ್ಯಾರ್‌ನ ಹನೀಫ್ (23), ಕಸ್ಬಾ ಬೆಂಗ್ರೆಯ ಮೊಹಮ್ಮದ್ ಶಕೀಲ್ ಹುಸೇನ್ (18) ಹಾಗೂ ಕಾವೂರಿನ ಗಾಂಧಿನಗರ ನಿವಾಸಿ ದಾವೂದ್ ಫರ್ಸೀನ್ ಅಹ್ಮದ್ (18) ಎಂದು ಗುರುತಿಸಲಾಗಿದೆ.

ಕಾರ್ಯಕ್ರಮಕ್ಕಾಗಿ ಪಾಂಡೇಶ್ವರದ ರಾಮಲಕ್ಷ್ಮಿ ಹಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಹಾಲ್‌ನಲ್ಲಿ ಜನದಟ್ಟಣೆ ಹೆಚ್ಚಾದ ಕಾರಣ ಹಲವು ವಿದ್ಯಾರ್ಥಿಗಳು ಹೊರಗಿನ ಕಾರಿಡಾರ್‌ನಲ್ಲಿ ನಿಂತಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ದುರ್ಬಲವಾಗಿದ್ದ ಪ್ಯಾರಪಿಟ್ ಗೋಡೆಗೆ ಒರಗಿ ನಿಂತಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳ ಭಾರ ತಾಳದೆ ಗೋಡೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ. ಗೋಡೆ ಕುಸಿದ ತಕ್ಷಣ ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಶಮಾಜ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಪಾಂಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.