ಬೆಳ್ತಂಗಡಿ: ಜಾಗದ ವಿಚಾರಕ್ಕೆ ಸಂಬಂಧಿಸಿದ ತಕರಾರಿನಲ್ಲಿ ವ್ಯಕ್ತಿಯೊಬ್ಬರಿಗೆ ಕಚ್ಚಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪ ಬೆಳ್ತಂಗಡಿಯಲ್ಲಿ ಕೇಳಿಬಂದಿದೆ.
ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿ ಸದಾನಂದ (52) ಅವರು ಬೆಳ್ತಂಗಡಿ ನಗರ ಪಂಚಾಯತ್‌ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮನೆಯ ಪಕ್ಕದಲ್ಲೇ ವಾಸಿಸುವ ತಮ್ಮ ಶಿವಾನಂದ ಎಂಬಾತನ ವಿರುದ್ಧ ದೂರು ನೀಡಲಾಗಿದೆ.
ಸೆಪ್ಟೆಂಬರ್ 19ರಂದು ರಾತ್ರಿ ಸುಮಾರು 9 ಗಂಟೆಗೆ ಸದಾನಂದ ಅವರು ಮನೆಯಲ್ಲಿದ್ದಾಗ ಶಿವಾನಂದ ಮನೆ ಅಂಗಳದ ಸಮೀಪ ಬಂದು ಅವಾಚ್ಯ ಶಬ್ದಗಳಿಂದ ಬೈದು, “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಬಂದಿದ್ದ ಆರೋಪಿಯನ್ನು ತಡೆಯಲು ಹೋದಾಗ, ಸದಾನಂದ ಅವರ ಬಲಭುಜಕ್ಕೆ ಕಚ್ಚಿ, ಕಬ್ಬಿಣದ ರಾಡ್‌ನಿಂದ ಸೊಂಟಕ್ಕೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಾಗದ ವಿಚಾರದಲ್ಲಿನ ತಕರಾರೇ ಘಟನೆಗೆ ಕಾರಣ ಎನ್ನಲಾಗಿದ್ದು, ಬಳಿಕ ಆರೋಪಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



